ಮಂಡ್ಯ: ಮೈಸೂರು (Mysuru) ಮತ್ತು ಬೆಂಗಳೂರಿಗರ (Bengaluru) ಜೀವನಾಡಿ ಶ್ರೀರಂಗಪಟ್ಟಣದಲ್ಲಿರುವ ಕನ್ನಂಬಾಡಿ ಅಣೆಕಟ್ಟು ಹೊಸ ಇತಿಹಾಸ ನಿರ್ಮಿಸಿದೆ. ಜನವರಿಯಲ್ಲೂ ಗರಿಷ್ಠ 124 ಅಡಿ ನೀರು ಸಂಗ್ರಹಣೆ ಮೂಲಕ ದಾಖಲೆ ಬರೆದಿದೆ.
ಕೃಷ್ಣರಾಜಸಾಗರ ಜಲಾಶಯ (KRS Dam) ನಿರ್ಮಾಣ ಮಾಡಿದ ಬಳಿಕ ಮೊಟ್ಟಮೊದಲ ಬಾರಿಗೆ ಈ ದಾಖಲೆ ನಿರ್ಮಾಣವಾಗಿದೆ. ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ಕಾಯ್ದುಕೊಂಡಿದೆ.
ಈಗಲೂ ಜಲಾಶಯ ಭರ್ತಿಯಾಗಿರುವ ಕಾರಣ ಈ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ಅನ್ನದಾತರು, ವಿಶೇಷವಾಗಿ ಬೆಂಗಳೂರಿಗರಿಗರಿಗೆ ನೀರಿನ ಅಭಾವ ಸೃಷ್ಟಿಯಾಗಲಾರದು. ಈ ಮೂಲಕ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಹೀಗಾಗಿ ಸರ್ಕಾರ ಮಂಗಳವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರ ರೈತರ ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ ಇಮ್ಮಡಿಗೊಳಿಸಿದೆ. ಇದನ್ನೂ ಓದಿ: ಶರಣಾದ ನಕ್ಸಲರಿಗೆ ಎಷ್ಟು ಹಣ ಸಿಗುತ್ತೆ? ಸರ್ಕಾರದ ಪ್ಯಾಕೇಜ್ ಎನು?
ಎರಡು ವರ್ಷಗಳ ಮಳೆ ಅಭಾವದಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ವರುಣನ ಕೃಪೆಯಿಂದ ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿದೆ. ಇದರಿಂದ ಕನ್ನಂಬಾಡಿ ಅಣೆಕಟ್ಟು ಕೂಡ ಭರ್ತಿಯಾಗಿದೆ. ಪ್ರಸಕ್ತ ವರ್ಷ ತಮಿಳುನಾಡಿಗೆ (Tamil Nadu) ಬಿಡಬೇಕಾದ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿದಿದೆ. ಹೀಗಾಗಿ ಈ ಬಾರಿ ಕಾವೇರಿ ಸಮಸ್ಯೆ ಕೂಡ ಇಲ್ಲ, ನೀರಿನ ಅಭಾವ ಕೂಡ ಇಲ್ಲ.
ಜೂನ್ 29ರಂದು ಕೂಡ ಜಲಾಶಯದ ನೀರಿನ ಮಟ್ಟವು 90 ಅಡಿಯಿತ್ತು. ನಂತರ ಕೊಡಗು (Kodagu) ಮತ್ತು ವಯನಾಡು ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಜುಲೈ 11ರಂದೇ ಜಲಾಶಯದ ನೀರಿನ ಮಟ್ಟವು 124 ಅಡಿ ದಾಟಿದರೂ ಜು. 25ರಂದು ಸಂಪೂರ್ಣ ಭರ್ತಿ ಮಾಡಿಸಲಾಗಿತ್ತು. 2009 ರಲ್ಲಿ 146 ದಿನ, 2022ರಲ್ಲಿ 114 ದಿನ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು.
ಜಲಾಶಯದಲ್ಲಿ124.30 ಅಡಿವರೆಗೆ ನೀರಿದ್ದು, 48.754 ಟಿಎಂಸಿ ಅಡಿ ನೀರು ಸಂಗ್ರಹಣೆಯಾಗಿದೆ. ಗರಿಷ್ಠ 124.80 ಅಡಿ ಎತ್ತರವುಳ್ಳ ಕನ್ನಂಬಾಡಿ ಕಟ್ಟೆಯು ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
ಕಳೆದ ವರ್ಷ ಜಲಾಶಯ ಬರಿದಾಗಿರುವುದನ್ನೇ ರಾಜಕೀಯವಾಗಿ ಜೆಡಿಎಸ್-ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಮಳೆಯಾಗಲ್ಲ, ತೀವ್ರ ಬರಗಾಲ ಕಾಡುತ್ತೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನ ಕಾಲ್ಗುಣದಿಂದ ಅಣೆಕಟ್ಟು ಖಾಲಿಯಾಗಿದೆ. ತೀವ್ರ ಬರಗಾಲದಿಂದ ನೀರಿನ ಹಾಹಾಕಾರ ಸೃಷ್ಟಿಯಾಗಿದೆ ಅಂತೆಲ್ಲ ಟೀಕಿಸುತ್ತಿದ್ದರು. ಇದೇ ಟೀಕೆ-ಟಿಪ್ಪಣಿ, ಭಾಷಣ ಮಾಡ್ತಿದ್ದ ಎದುರಾಳಿಗಳು ಮತ್ತು ಟೀಕಾಕಾರರಿಗೆ ಸಚಿವ ಚಲುವರಾಯಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ.
ಡ್ಯಾಂ ಕಟ್ಟಿದಾಗಿನಿಂದ ಈ ವರ್ಷ ದಾಖಲೆ ನಿರ್ಮಾಣವಾಗಿದೆ. ಸತತ 156 ದಿನ ಕೆಆರ್‌ಎಸ್‌ನಲ್ಲಿ ಯಾವ ವರ್ಷವೂ ಗರಿಷ್ಟ ಮಟ್ಟದ ನೀರಿರಲಿಲ್ಲ. ಇದೇ ಮೊದಲು ಇಷ್ಟು ವರ್ಷ, ಇಷ್ಟು ದಿನ ಈ ಪ್ರಮಾಣದ ನೀರು ಇರೋದು. ಕಾಂಗ್ರೆಸ್ ಬಂದಾಗಲೆಲ್ಲಾ ಬರಗಾಲ ಎಂದು ಟೀಕೆ ಮಾಡುತ್ತಿದ್ದರು. ಅಂತಹ ಟೀಕೆ-ಟಿಪ್ಪಣಿಗಳಿಗೆ ಇದು ಉತ್ತರ ಎಂದು ತಿರುಗೇಟು ನೀಡಿದ್ದಾರೆ.