ನವದೆಹಲಿ:ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವು 2013ರ ನವೆಂಬರ್ 29 ರಂದು ಅಂತಿಮವಾಗಿ ನೀಡಿರುವ ಐತೀರ್ಪನ್ನು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿರುವ ಮಧ್ಯಕಾಲೀನ ಅರ್ಜಿಗಳನ್ನು ಇದೇ ತಿಂಗಳ 29ರಂದು ನ್ಯಾಯಾಲಯದ ಕಲಾಪ ಪಟ್ಟಿಯಲ್ಲಿ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ದ್ವಿಸದಸ್ಯಪೀಠ ಇಂದು ಆದೇಶಿಸಿತು.
ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ಅವರಿದ್ದ ಪೀಠ ಈ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡುವಂತೆ ತೆಲಂಗಾಣ ಮತ್ತು ಆಂಧ್ರ ರಾಜ್ಯಗಳು ಮಾಡಿದ ಮನವಿಯನ್ನು ಪುರಸ್ಕರಿಸಲಾಯಿತು.
Advertisement
Advertisement
ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು ನ್ಯಾಯಾಧಿಕರಣದ ಐತೀರ್ಪಿನ ನಂತರ ಕರ್ನಾಟಕವು 13 ಸಾವಿರ ಕೋಟಿ ರೂಪಾಯಿ ವೆಚ್ಚಮಾಡಿ 1205 ಕಿ.ಮೀ. ಉದ್ದದ ಕಾಲುವೆ ಸರಪಳಿಯನ್ನು ನಿರ್ಮಿಸಿ ಕೊಂಡಿದೆ. ಈ ಕಾಲುವೆಗಳಿಗೆ ಹರಿಯಬೇಕಾದ ನೀರು ಬಂಗಾಳಕೊಲ್ಲಿಗೆ ವ್ಯರ್ಥವಾಗಿ ಹರಿಯುತ್ತಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಅತ್ಯಂತ ತುರ್ತಾಗಿ ನಡೆಯಬೇಕಾಗಿದೆ. ಗೆಜೆಟ್ ಪ್ರಕಟಣೆಗೆ ಮಹತ್ವದ ವಿಷಯವಾಗಿದೆ. ಎರಡು ವಾರಗಳ ನಂತರ ಇದನ್ನು ಪಟ್ಟಿಮಾಡಬೇಕು. ಕರ್ನಾಟಕವು ಗೆಜೆಟ್ ಪ್ರಕಟಣೆ ಕೋರಿ ಸಲ್ಲಿಸಿದ ಮಧ್ಯಕಾಲೀನ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ಗೆ ನ್ಯಾಯವಾದಿ ಶ್ಯಾಮ್ ದಿವಾನ್ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ನ್ಯಾಯವಾದಿಗಳು ಇದೇ ವಿಷಯವಾಗಿ ತಮ್ಮ ರಾಜ್ಯದ ಮಧ್ಯಕಾಲೀನ ಅರ್ಜಿಯನ್ನು ಸಹ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಕೋರಿದರು. ಇದನ್ನೂ ಓದಿ: ಹೆಚ್.ಆರ್ ರಂಗನಾಥ್ ಅವರಿಗೆ ನಾನು ಆಭಾರಿಯಾಗಿದ್ದೇನೆ: ಹರೇಕಳ ಹಾಜಬ್ಬ
Advertisement
ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಗೆಜೆಟ್ ಪ್ರಕಟಣೆ ಕೋರಿರುವ ಮಧ್ಯಕಾಲೀನ ಅರ್ಜಿಗಳನ್ನು ನ.29 ರಂದು ನ್ಯಾಯಾಲಯದ ಕಲಾಪ ಪಟ್ಟಿಗೆ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಈ ಪ್ರಕರಣದಲ್ಲಿ ವಾದಿಯನ್ನಾಗಿಸುವುದಕ್ಕೆ ಕರ್ನಾಟಕವು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಮಾನ್ಯ ಮಾಡಿತು. ಪ್ರಕರಣವನ್ನು ನ.29ಕ್ಕೆ ಮುಂದೂಡಲಾಯಿತು.