ಬೆಳಗಾವಿ: ಕೃಷ್ಣಾ ನದಿಯ ಪ್ರವಾಹದಿಂದ ಮೊಸಳೆಯೊಂದು ಮನೆಯ ಮೇಲೇರಿ ಕುಳಿತ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದ್ದು, ಇದೀಗ ಪ್ರವಾಹ ಪೀಡಿತರಲ್ಲಿ ಭಾರೀ ಭಯ ಶುರುವಾಗಿದೆ.
ಅಜಿತ ನಗರದ ಮನೆಯೊಂದರಲ್ಲಿ ಪತ್ತೆಯಾದ ಮೊಸಳೆ ಸುಮಾರು 10 ಅಡಿಯಷ್ಟು ಉದ್ದವಿದ್ದು, ಮನೆಯ ಸುತ್ತಲೂ ಕೃಷ್ಣಾ ನದಿ ನೀರು ಸುತ್ತುವರಿದಿದ್ದರಿಂದ ಮನೆಗೆ ಹಾಕಿದ್ದ ಶೀಟ್ ಮೇಲೆ ಮೊಸಳೆ ಆಶ್ರಯ ಪಡೆದಿದೆ. ಅಲ್ಲದೆ, ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಕಳೆದ ಆರು ದಿನಗಳಿಂದ ಕೆಲ ನಿರಾಶ್ರಿತರು ಮನೆಯ ಮೇಲ್ಛಾವಣಿ ಮೇಲೆಯೇ ಆಶ್ರಯ ಪಡೆದಿದ್ದರು. ಅವರಿಗೂ ಸಹ ಮೊಸಳೆ ಕಾಣಿಸಿದ್ದರಿಂದ ಆತಂಕ ಶುರುವಾಗಿದೆ. ಮೊಸಳೆ, ಹಾವು, ಚೇಳಿನಂತಹ ವಿಷ ಜಂತುಗಳಿಂದ ನಿರಾಶ್ರಿತರಲ್ಲಿ ಭಯ ಹೆಚ್ಚಾಗಿದೆ. ಅಲ್ಲಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದರಿಂದ ಜೀವ ಭಯದಿಂದ ಕಾಲ ಕಳೆಯುತ್ತಿದ್ದಾರೆ.
ಇನ್ನೊಂದೆಡೆ ಮನೆ ಮಠವನ್ನು ಬಿಟ್ಟು ಬಂದಿರುವ ಪ್ರವಾಹ ಪೀಡಿತರಿಗೆ ತಮ್ಮ ಮನೆಯದ್ದೇ ಚಿಂತೆಯಾಗಿದ್ದು, ಪ್ರವಾಹದಿಂದ ಹಾನಿಗೀಡಾದವರಿಗೆ ಆಶ್ರಯ ಎಲ್ಲಿ ಪಡೆಯುವುದು ಎಂಬ ಚಿಂತೆಯಾದರೆ. ಮನೆ ಗಟ್ಟಿಯಾಗಿದ್ದು, ಪ್ರವಾಹದಿಂದ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾದವರು ನಮ್ಮ ಮನೆಯಲ್ಲಿ ಯಾವ ಪ್ರಾಣಿಗಳು ಹೊಕ್ಕಿವೆಯೋ ಎಂಬ ಚಿಂತೆಯಲ್ಲಿದ್ದಾರೆ.
ಕೃಷ್ಣಾ ನದಿಯ ಪ್ರವಾಹದಿಂದ ಮೊಸಳೆ ಮನೆಯೊಂದರ ಮೇಲೆ ಏರಿ ಕುಳಿತಿದ್ದು, ಇದ್ದಕ್ಕಿದ್ದಂತೆ ಮೊಸಳೆ ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಮೂಲಕ ಪ್ರವಾಹ ಭೀತಿಯಿಂದ ನಲುಗಿಹೋದವರಿಗೆ ಇದೀಗ ಮೊಸಳೆ ಭೀತಿ ಶುರುವಾಗಿದೆ.