ಮಂಡ್ಯ: ಕೆಲ ದಿನಗಳಿಂದ ಯಾರ ಕೈಗೂ ಸಿಗದೇ ನಾಪತ್ತೆಯಾಗಿರುವ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾರಾಯಣ ಗೌಡ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮಂಡ್ಯದ ವಾಟ್ಸಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದೆ. ನನಗೆ ಆಕಸ್ಮಿಕವಾಗಿ ಫುಡ್ ಪಾಯ್ಸನ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ ಇಂದು ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ನಾನು ಹಾಜರಾಗುತ್ತಿಲ್ಲ ಎಂದು ನಾರಾಯಣ ಗೌಡ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಸರ್ಕಾರ ಬೀಳಿಸಲು ಪೊಲೀಸ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ!
ಇಂದು ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ವೈದ್ಯರು ಡಿಸ್ಚಾರ್ಜ್ ಮಾಡುತ್ತಿಲ್ಲ. ಹಾಗಾಗಿ ಇಂದು ನಾನು ಸದನಕ್ಕೆ ಹಾಜರಾಗುತ್ತಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಸ್ಪೀಕರ್ ಗಮನಕ್ಕೂ ತಂದಿದ್ದೇನೆ. ಡಿಸ್ಚಾರ್ಜ್ ಆದ ಕೂಡಲೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಕೆ ಆರ್ ಪೇಟೆಗೂ ಶೀಘ್ರದಲ್ಲೇ ಬರುತ್ತೇನೆ ಎಂದು ಆಪ್ತರ ಬಳಿ ನಾರಾಯಣ ಗೌಡ ಹೇಳಿಕೊಂಡಿದ್ದಾರೆ.
ನಾಪತ್ತೆಯಾಗಿರುವ ನಾರಾಯಣ ಗೌಡ ಇಲ್ಲಿಯವರೆಗೂ ಯಾರ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ತನ್ನ ಎಲ್ಲ ಸದಸ್ಯರು ಸದನದಲ್ಲಿ ಹಾಜರು ಇರಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ವಿಪ್ ಜಾರಿಯಾದ ಬಳಿಕ ಸದನಕ್ಕೆ ಗೈರು ಹಾಜರಿ ಆದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಸದಸ್ಯರನ್ನು ಅನರ್ಹತೆ ಮಾಡಲು ಪಕ್ಷಗಳಿಗೆ ಅಧಿಕಾರವಿದೆ. ಅನರ್ಹತೆ ಭೀತಿಯಿಂದ ಪಾರಾಗಲು ನಾರಾಯಣ ಗೌಡ ಆಸ್ಪತ್ರೆಗೆ ದಾಖಲಾಗಿದ್ದಾರಾ ಎನ್ನುವ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv