ಬೆಂಗಳೂರು: ಕೆಆರ್‌ನಗರ ಸಂತ್ರಸ್ತೆಯನ್ನು ಅಪಹರಣ (Kidanp Case) ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯ ವಿಚಾರಣೆ ಮುಗಿದಿದ್ದು ಕೋರ್ಟ್ ಮೇ 31ಕ್ಕೆ ಆದೇಶ ಕಾಯ್ದಿರಿಸಿದೆ.
ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ವಿಶೇಷ ತನಿಖಾ ತಂಡ (SIT) ಬಲವಾಗಿ ವಿರೋಧಿಸಿತು. ಅಲ್ಲದೇ ಹಲವು ಗುರುತರ ಆರೋಪಗಳನ್ನು ಭವಾನಿ ರೇವಣ್ಣ ವಿರುದ್ಧ ಎಸ್‌ಐಟಿ ಪರ ವಕೀಲರು ಮಾಡಿದರು. ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದರು. ಆದರೆ ಇದಕ್ಕೆ ಭವಾನಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ಯಾಲೆಸ್ತೀನ್ ಬೆಂಬಲಿಸಿದ್ದಕ್ಕೆ ಟ್ರೋಲ್ ಬೆನ್ನಲ್ಲೇ ಹಿಟ್‌ಮ್ಯಾನ್ ಪತ್ನಿ ಪೋಸ್ಟ್ ಡಿಲೀಟ್
ಎಸ್‌ಪಿಪಿ ವಾದ ಏನಿತ್ತು?
ಭವಾನಿಯವರು ಸಂತ್ರಸ್ತೆಯಿಂದ ವೀಡಿಯೋ ಮಾಡಿಸಲು ಎರಡನೇ ಆರೋಪಿಗೆ ತಿಳಿಸಿದ್ದಾರೆ. ಭವಾನಿ ಫೋನ್ ಸಂಭಾಷಣೆಯ ಸಾಕ್ಷ್ಯ ನಮ್ಮ ಬಳಿ ಇದೆ. ಸತೀಶ್ ಬಾಬಣ್ಣ ಮೊಬೈಲ್‌ನಿಂದ ಕಾಲ್ ರೆಕಾರ್ಡ್ ಪಡೆಯಲಾಗಿದೆ.
ಆ ಸಂಭಾಷಣೆಯಲ್ಲಿ ಮೇಡಂ ಎಂದು ಸಂಭೋದನೆ ಆಗಿದ್ದು ಸಂತ್ರಸ್ತೆಗೆ 150 – 200 ಸೀರೆ ಕೊಡಿಸಿ ಅಂತಾ ಭವಾನಿ ಹೇಳುತ್ತಾರೆ. ಬಾಬಣ್ಣ ಮೇ3 ರಂದು ಸಂತ್ರಸ್ತೆಯಿಂದ ವೀಡಿಯೋ ಮಾಡಿಸಿದ್ದಾರೆ. ಸಂತ್ರಸ್ತೆಯ ಮೊಬೈಲ್ ಕಿತ್ಕೊಂಡು, ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಸಂತ್ರಸ್ತೆ ಮಗಳ ಹೇಳಿಕೆ, ಡಾಕ್ಟರ್ ಹೇಳಿಕೆ ಎಲ್ಲಾ ಸಾಕ್ಷಿಗಳು ಇವೆ. ರಾಜಕೀಯ ಪ್ರಭಾವ ಇರುವ ಮಹಿಳೆಯ ವಿಚಾರಣೆ ಬಹಳ ಅಗತ್ಯವಿದೆ. ಯಾವುದೇ ಬೆದರಿಕೆ ಇಲ್ಲದೇ ಇದ್ದರೂ ಓಡಿ ಹೋಗಿದ್ದು ಯಾಕೆ? ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು.
ಭವಾನಿ ಪರ ವಕೀಲರ ವಾದ ಏನಿತ್ತು?
ಕೆಆರ್ ನಗರ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರಿಲ್ಲ ಮತ್ತು ಭವಾನಿ ವಿರುದ್ಧ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಫೋನ್ ಸಂಭಾಷಣೆಯನ್ನೇ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಭವಾನಿ ವಿರುದ್ಧ ನೇರವಾಗಿ ಆರೋಪ ಮಾಡುವ ಸಾಕ್ಷ್ಯಗಳಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎಂಬ ನಂಬಿಕೆ ಇಲ್ಲ. ಅಗತ್ಯ ಇದ್ದಲ್ಲಿ ತನಿಖೆಗೆ ಭವಾನಿ ಸಹಕಾರ ನೀಡುತ್ತಾರೆ. ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ.