ಬೆಂಗಳೂರು: ತಾವು ಪಕ್ಷೇತರ ಅಭ್ಯರ್ಥಿ ಎಂದು ಹೇಳಿಕೊಂಡು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟಿರುವ ಆರ್.ಶಂಕರ್ ಅವರಿಗೆ ಸಂಕಷ್ಟ ಎದುರಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅವರ ವಿರುದ್ಧ ಕ್ರಮಕೈಗೊಳ್ಳಲು ಅವಕಾಶ ಇದೆಯಾ ಎಂಬ ಬಗ್ಗೆ ಚಿಂತನೆ ನಡೆಸಿದ್ದಾಗಿ ಕೆಪಿಜೆಪಿ ಪಕ್ಷದ ಅಧ್ಯಕ್ಷರಾದ ಮಹೇಶ್ ಗೌಡ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಆರ್.ಶಂಕರ್ ಅವರು ಪ್ರತಿ ಬಾರಿ ಮಾಧ್ಯಮಗಳ ಮೂಲಕ ತಾವು ಪಕ್ಷೇತರ ಅಭ್ಯರ್ಥಿ ಎಂದು ಹೇಳುತ್ತಾರೆ. ಆದರೆ ಅವರು ಕೆಪಿಜೆಪಿ ಪಕ್ಷದ ಚಿಹ್ನೆಯಿಂದ ಗೆದ್ದು ಬಂದಿದ್ದಾರೆ. ಅವರಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಅವರನ್ನು ಸಂಪರ್ಕ ಮಾಡಲು ಕೂಡ ಆಗುತ್ತಿಲ್ಲ. ಆದ್ದರಿಂದ ಕಾನೂನು ಸಲಹೆ ಪಡೆದು ಸ್ಪೀಕರ್ ಹಾಗೂ ರಾಜ್ಯಪಾಲರ ಭೇಟಿ ಮಾಡಿ ಕ್ರಮಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.
ಇತ್ತೀಚೆಗಷ್ಟೇ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಆರ್.ಶಂಕರ್ ಅವರು ಕೆಲ ದಿನಗಳ ಬೆನ್ನಲ್ಲೇ ತಮ್ಮ ಬೆಂಬಲ ವಾಪಸ್ ಪಡೆದು ಮುಂಬೈಗೆ ತೆರಳಿದ್ದರು. ಸರ್ಕಾರದೊಂದಿಗೆ ಇರುವುದಾಗಿ ಹೇಳಿದ್ದ ಇವರು ಪದೇ ಪದೇ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡುವುದಾಗಿಯೂ ಹೇಳಿದ್ದರು. ಆದರೆ ಇದು ಅವರಿಂದ ಸಾಧ್ಯವಿಲ್ಲ. ಈಗಲೂ ನಾನು ಪಕ್ಷವನ್ನು ವಿಲೀನ ಮಾಡಲು ಸಿದ್ಧರಾಗಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಶಂಕರ್ ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲು ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇನೆ ಎಂದು ಮಹೇಶ್ ಗೌಡ ಅವರು ಹೇಳಿದ್ದಾರೆ.