ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಎಲ್ಲ ಪಕ್ಷಗಳು ಚುನಾವಣೆಗಾಗಿ ಭರ್ಜರಿ ಸಿದ್ಧತೆ ನಡೆಸಿಕೊಂಡಿವೆ. ರಾಷ್ಟ್ರೀಯ ಪಕ್ಷಗಳೂ ಸಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಗುಪ್ತ ವರದಿಗಳನ್ನು ತರಿಸಿ ಅಧ್ಯಯನ ನಡೆಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಈಗಾಗಲೇ ಗುಪ್ತ ವರದಿಯೊಂದನ್ನು ತಯಾರು ಮಾಡಿ ಕಳುಹಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿ ಯಾವ ರೀತಿಯಲ್ಲಿ ಸಿದ್ಧಪಡಿಸಬೇಕು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಎಲ್ಲ ಮಾಹಿತಿಗಳು ವರದಿಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ. ಪರಮೇಶ್ವರ್ ನೀಡಿರುವ ವರದಿಯಲ್ಲಿ ಪಂಚ ಅಂಶಗಳು ಇದೆ ಅಂತಾ ಹೇಳಲಾಗುತ್ತಿದ್ದು, ಅವುಗಳು ಈ ಕೆಳಗಿನಂತಿವೆ.
Advertisement
ವರದಿಯಲ್ಲಿ ಏನಿದೆ..?
1. ಹಾಲಿ 124 ಶಾಸಕರ ಪೈಕಿ 70 ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸೋಲುವ ಭಯ ಇರುವ ಶಾಸಕರ ಬದಲಿಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು.
2. ಅರ್ಜಿ ಹಾಕಿದವರಿಗಷ್ಟೆ ಟಿಕೆಟ್ ಎಂಬ ನಿಯಮವಿದೆ. ಆದ್ರೆ ಕ್ರೀಡಾ ಕ್ಷೇತ್ರ, ಕಲೆ ಸಾಹಿತ್ಯ, ಉದ್ಯಮ ಕ್ಷೇತ್ರದ ಸ್ಟಾರ್ ವ್ಯಾಲ್ಯೂ ಇರುವ ಕನಿಷ್ಠ 15 ಜನರಿಗೆ ಟಿಕೆಟ್ ನೀಡುವುದು ಸೂಕ್ತ.
3. ರಾಜ್ಯದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದ್ರೂ ಬೆಂಗಳೂರಲ್ಲಿ ಪಕ್ಷ ಸ್ವಲ್ಪ ವೀಕ್ ಆಗಿದೆ. ಬೆಂಗಳೂರಿನ ಜನರ ಮನಸ್ಥಿತಿ ಹಾಗೂ ವಿಭಿನ್ನತೆ ಪಕ್ಷಕ್ಕೆ ಹೆಚ್ಚಿನ ನೆರವು ನೀಡಲ್ಲ.
4. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ಪಕ್ಷ ಗೆದ್ದರೆ ಅವರಿಗೆ ಮೊದಲ ಆದ್ಯತೆ. ಹಾಗೆಯೇ ಪಕ್ಷಕ್ಕೆ ಹಿನ್ನಡೆಯಾದರೂ ಅದ್ರ ಜವಾಬ್ದಾರಿ ಅವರದ್ದೇ ಆಗಲಿದೆ.
5. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಅಗತ್ಯ ಇರಲಿಲ್ಲ. ಸಮುದಾಯದ ಮುಖಂಡರುಗಳು ಹಾಗೂ ಮಠಾಧೀಶರಿಗೆ ಬಿಟ್ಟಿದ್ದರೆ ಒಳ್ಳೆಯದಿತ್ತು.
Advertisement
ಪರಮೇಶ್ವರ್ ನೀಡಿರುವ ಗುಪ್ತ ವರದಿಯಲ್ಲಿ ಪ್ರಮುಖವಾಗಿ ಈ ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಯಾರು ಯಾರಿಗೆ ಟಿಕೆಟ್ ನೀಡ್ತಾರೆ ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.