ಪ್ರಧಾನಿ ಮೋದಿ ಸಾಧನೆ ಶೂನ್ಯ: ದಿನೇಶ್ ಗುಂಡೂರಾವ್

Public TV
2 Min Read
mnd dinesh gundurao

– ಭಾವನಾತ್ಮಕ ಹೇಳಿಕೆಗಳಿಂದ ಮತ ಯಾಚನೆ
– ಕರ್ನಾಟಕ ರಾಜಕಾರಣವೇ ನನಗೆ ಸಾಕಾಗಿದೆ, ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡ್ಲಿ: ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಶೂನ್ಯ. ಹೀಗಾಗಿ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳುವ ಬದಲು ಭಾವನಾತ್ಮಕ ಹೇಳಿಕೆಗಳ ಮೂಲಕ ಮತ ಯಾಚಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ `ಸುಳ್ಳು, ಪೊಳ್ಳು, ಜೊಳ್ಳು’ ಎಂಬ ಸ್ಲೋಗನ್ ಅಡಿ ಕಿರುಹೊತ್ತಿಗೆಯನ್ನು ಕಾಂಗ್ರೆಸ್ ಪುಸ್ತಕ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನರೇಗಾ ಯೋಜನೆ ದುರ್ಬಳಕೆ ಮಾಡುವ ಪ್ರಯತ್ನ ಮಾಡಿತ್ತು. ಭೂ ಸ್ವಾಧೀನ ಕಾಯ್ದೆ ಸಡಿಲ ಮಾಡುವ ಪ್ರಯತ್ನ ಮಾಡಿದರು. ಸಾಮಾನ್ಯ ಜನರ ಬಗ್ಗೆ ಬಿಜೆಪಿಯವರಿಗೆ ಕನಿಕರವಿಲ್ಲ. ಈ ಹಿಂದೆ ಮಂದಿರ ಅಂತ ರಾಜಕಾರಣ ಮಾಡಿದರು. ಈಗ ರಾಷ್ಟ್ರೀಯತೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬೆಳಗಾವಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದನ್ನ ಬಹಿರಂಗಪಡಿಸಲು ಆಗಲ್ಲ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ. ಹೀಗಾಗಿ ಅದರ ಬಗ್ಗೆ ನಾನು ಏನೂ ಹೇಳಲ್ಲ ಎಂದರು.

ನನ್ನನ್ನು ಏಕೆ ನೀವು ಬಿಡುತ್ತಿಲ್ಲ. ನಾನು ಲೋಕಸಭೆಗೆ ನಿಲ್ಲುವುದಿಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಅಭಿಮಾನಕ್ಕೆ ಕೆಲವರು ನಿಲ್ಲಿ ಅಂತಾರೆ. ಕರ್ನಾಟಕ ರಾಜಕಾರಣವೇ ನನಗೆ ಸಾಕಾಗಿದೆ. ಇನ್ನು ಎಲ್ಲಿ ರಾಷ್ಟ್ರ ರಾಜಕಾರಣ ಮಾಡುವುದು? ಲೋಕಸಭೆಗೆ ನಾನು ಸ್ಪರ್ಧಿಸಲ್ಲ ಎಂದು ಮತ್ತೊಮ್ಮೆ ಮಾಜಿ ಸಿಎಂ ಸ್ಪಷ್ಟಪಡಿಸಿದರು.

ಮಾಜಿ ಸಚಿವ ಎ.ಮಂಜು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಬಹಳ ಜನರನ್ನು ಭೇಟಿ ಮಾಡುತ್ತಾರೆ. ಕಾರ್ಯಕ್ರಮ, ವಿಮಾನ ನಿಲ್ದಾಣದಲ್ಲಿ ನಾನು ಹಾಗೂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದೇವೆ. ಭೇಟಿಗೆ ಸಂಶಯ ಪಟ್ಟರೆ ಹೇಗೆ? ನಾನು ಎ.ಮಂಜು ಅವರ ಜೊತೆ ಮಾತನಾಡಿದ್ದೇನೆ. ಅವರು ಬಿಜೆಪಿಗೆ ಹೋಗಲ್ಲವೆಂದು ಹೇಳಿದ್ದಾರೆ ಎಂದರು.

ಮೈತ್ರಿಯಿಂದ ಕಾಂಗ್ರೆಸ್‍ಗೆ ನಷ್ಟ ಎಂದು ಎ.ಮಂಜು ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಉಮೇಶ್ ಜಾಧವ್ ವಿರುದ್ಧ ಅಸಮಾಧಾನ ಹೊರ ಹಾಕಿದರು. ಲೋಕಸಭಾ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಅವರು ನಾಮಪತ್ರ ಸಲ್ಲಿಸಿ, ಅದು ಅಂಗೀಕಾರವಾದರೂ ನಾವು ಕಾನೂನು ಹೋರಾಟ ಮಾಡುವ ಬಗ್ಗೆ ತಜ್ಞರ ಸಲಹೆ ಪಡೆಯುತ್ತೇವೆ ಎಂದು ಮಾಜಿ ಸಿಎಂ ಹೇಳಿದರು.

UMESH

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *