– ಸಭೆಗೆ ಪರಮೇಶ್ವರ್ ಚಕ್ಕರ್
ಬೆಂಗಳೂರು: ನಾನು ಅಧ್ಯಕ್ಷ ಸ್ಥಾನಕ್ಕೆ ಇಲ್ಲೇ ಬೇಕಾದರೂ ರಾಜೀನಾಮೆ ಕೊಡುತ್ತೇನೆ. ಯಾರಾದರು ಆಸಕ್ತಿ ಇದ್ದವರು ಅಧ್ಯಕ್ಷರಾಗಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಡಿಮಿಡಿಗೊಂಡಿದ್ದಾರೆ.
ಇಂದು ಬೆಳಗ್ಗೆ ಖಾಸಗಿ ಹೋಟೆಲಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ದಿನೇಶ್ ಈ ರೀತಿ ಗರಂ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆದರೆ ಸಭೆ ಬಳಿಕ ಪ್ರತಿಕ್ರಿಯಿಸಿದ ದಿನೇಶ್, ನಾನು ರಾಜೀನಾಮೆ ಕೊಡುತ್ತೇನೆ ಎಂದಿಲ್ಲ. ಸಭೆಯಲ್ಲಿ ಸಹಜವಾಗಿ ಚರ್ಚೆ ಆಗುತ್ತದೆ. ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದೆ. ಅದು ಭಿನ್ನಮತ ಅಲ್ಲ. ಸಭೆ ಅಂದ ಮೇಲೆ ಚರ್ಚೆಗಳು ಆಗುತ್ತವೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
Advertisement
Advertisement
ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ ನಾಯಕರಲ್ಲಿ ಏನೂ ಗೊಂದಲ ಇಲ್ಲ. ನಾಳೆ ಬೆಳಗ್ಗೆ ಅಥವಾ ಇಂದು ಸಂಜೆ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಕೆಲ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಬೇಕಿದೆ. ಅದನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
Advertisement
ಸಭೆ ಆರಂಭಕ್ಕೂ ಮುನ್ನ ಕೈ ನಾಯಕರ ನಡುವೆ ಗಲಾಟೆ ಎದ್ದಿದೆ. ಪರಮೇಶ್ವರ್ ಗೆ ಕಾಯುತ್ತಿರುವಾಗಲೇ ಸಂಸದ ಬಿ.ಕೆ.ಹರಿಪ್ರಸಾದ್ ಅವರು ದಿನೇಶ್ ಗುಂಡೂರಾವ್ ಗೆ ಕ್ಲಾಸ್ ತೆಗೆದುಕೊಂಡರು. ಪಕ್ಷ ಮುನ್ನಡೆಸಿ ಅಂದರೆ ನಿಮ್ಮ ಗುಂಪನ್ನು ಮುನ್ನಡೆಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡರು. ಒಂದಾದರೂ ಸಭೆಯನ್ನ ಸರಿಯಾಗಿ ನಡೆಸಿದ್ದೀರಾ. ನೀವು ಪಕ್ಷದ ಅಧ್ಯಕ್ಷರಾ ಅಥವಾ ಪಕ್ಷದ ಒಳಗಿನ ಗುಂಪುಗಾರಿಕೆ ತಂಡದ ಅಧ್ಯಕ್ಷರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಿಮ್ಮ ವರ್ತನೆಯೆ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಮಾತಿಗೆ ಕಕ್ಕಾಬಿಕ್ಕಿಯಾದ ದಿನೇಶ್, ಏನೂ ಮಾತನಾಡಿದೆ ಮೌನ ವಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಪಕ್ಷ ವಿರೋಧಿ ಚಟುವಟಿಕೆ ಅಂತ ರೋಶನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಇದೇ ವೇಳೆ ಮುನಿಯಪ್ಪ ಕೂಡ ಗರಂ ಆದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧವೂ ಮುನಿಯಪ್ಪ ಕಿಡಿಕಾರಿದ್ದು, 2018 ರ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಿಮ್ಮ ನೇತೃತ್ವದಲ್ಲಿ ಹೋದೆವು. ಆದರೆ ಎರಡರಲ್ಲೂ ಸೋಲನುಭವಿಸಿದೆವು. ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ರಾಜ್ಯದಲ್ಲಿ ಯಾರು ನೈತಿಕ ಹೊಣೆ ಹೊತ್ತಿದ್ದೀರಾ ಎಂದು ಪ್ರಶ್ನಿಸಿದರು. ಟಿಕೆಟ್ ನಿಮಗೆ ಬೇಕಾದವರಿಗೆ ಕೊಟ್ಟುಕೊಳ್ತೀರಿ. ಪಕ್ಷದ ಸೋಲಿಗೆ ಯಾರು ಹೊಣೆ ಎಂದು ಮುನಿಯಪ್ಪ ಖಡಕ್ಕಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ಅವರಿಗಾಗಿ ಕಾದು ಕೊನೆಗೆ ಸಭೆ ಆರಂಭಿಸಿದ ಕೈ ನಾಯಕರು, ಸಭೆಯಿಂದಲೇ ಪರಮೇಶ್ವರ್ ಗೆ ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕರೆ ಮಾಡಿ ಮಾತನಾಡಿದರು. ಈ ವೇಳೆ ಪರಂ, ಚಿಕ್ಕಮಗಳೂರಿಗೆ ಹೋಗಿದ್ದೇನೆ ಬರುವುದು ತಡವಾಗುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಗೆ ಪರಮೇಶ್ವರ್ ಗೈರಾಗಿದ್ದಾರೆ.
ಸಭೆಯಲ್ಲಿ ಈಶ್ವರ್ ಖಂಡ್ರೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಸಾಕೇಜ್ ಶೈಲಜನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಉಪಸ್ಥಿತರಿದ್ದರು.