ಬೆಂಗಳೂರು: ಅನರ್ಹ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ರಾಜರಂತೆ ಮೆರೆಯುತ್ತಿದ್ದರು. ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ನಾನು ಈ ಕುರಿತು ಹೇಳಿದ್ದೆ. ಬಿಜೆಪಿ ನಂಬಿ ಹೋಗಬೇಡಿ ಎಂದು ಸಲಹೆ ನೀಡಿದ್ದೆ. ಈಗ ಹೋಗಿ ಬಿಜೆಪಿ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದಾಗ ಅವರ ಬೇಡಿಕೆಗಳನ್ನು ಈಡೇರಿಸುತ್ತಿದ್ದೆವು. ಎಲ್ಲ ಸಮಸ್ಯೆಗಳನ್ನು ಆಲಿಸುತ್ತಿದ್ದೆವು. ಇಲ್ಲಿ ಅವರಿಗೆ ಮುಕ್ತ ಅವಕಾಶವಿತ್ತು. ಇಷ್ಟಾದರೂ ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಏನು ಮಾಡಿತ್ತು ಅವರಿಗೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
Advertisement
ಸುಪ್ರೀಂ ನ್ಯಾಯಾಧೀಶ ಶಾಂತನಗೌಡರ್ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ರಮೇಶ್ ಕುಮಾರ್ ಸಹ ಈ ಹಿಂದೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಶಾಸಕರ ರಾಜೀನಾಮೆ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಸಕರನ್ನು ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರು ಪಕ್ಷಾಂತರಿಗಳು ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅನರ್ಹರು ಕಾಂಗ್ರೆಸ್‍ಗೆ ವಾಪಸ್ ಬರುವ ಪ್ರಶ್ನೆಯೇ ಇಲ್ಲ. ನಾವು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಪಕ್ಷಕ್ಕೆ ಅವರನ್ನು ವಾಪಸ್ ಸೇರಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಈಗಲೂ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ಅವರನ್ನು ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಮಹಾತ್ಮಾ ಗಾಂಧೀಜಿಯವರನ್ನು ಸ್ವಚ್ಛತೆಗಷ್ಟೇ ಸೀಮಿತಗೊಳಿಸಲಾಗಿದೆ. ನಾವು ಪೊರಕೆ ಹಿಡಿದು ಪೋಸ್ ಕೊಡಲ್ಲ ಬದಲಿಗೆ ಪಾದಯಾತ್ರೆ ಮೂಲಕ ಅವರ ತತ್ವಾದರ್ಶಗಳನ್ನು ತಿಳಿಸುತ್ತೇವೆ. ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ನೆನಪಿಸುತ್ತೇವೆ. ಗಾಂಧಿಯವರ ಆದರ್ಶಗಳನ್ನು ಇಂದು ನೆನೆಪಿಸಿಕೊಳ್ಳುತ್ತಿಲ್ಲ. ಬದಲಿಗೆ ಅವರನ್ನು ಸ್ವಚ್ಛತೆಗಷ್ಟೇ ಸೀಮಿತಗೊಳಿಸಲಾಗಿದೆ. ರಾಷ್ಟ್ರೀಯತೆ ಪದ ರಾಜಕಾರಣಕ್ಕೆ ಬಳಕೆಯಾಗುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
Advertisement
ಅಕ್ಟೋಬರ್ 2 ರಿಂದ ಜನವರಿ 31ರ ವರೆಗೆ ಗಾಂಧಿ ಜಯಂತಿ ಆಚರಣೆ ಮಾಡಲಾಗುವುದು. ಈ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರನ್ನು ನೆನಪಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ವಿನೂತನ ಕಾರ್ಯಕ್ರಮ ನಡೆಸಿ ಅವರ ತತ್ವಾದರ್ಶಗಳನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿಯವರು ಪೊರಕೆ ಹಿಡಿದು ಸ್ವಚ್ಛತೆ ಅಂತ ಪೋಸ್ ಕೊಡುತ್ತಾರೆ. ನಾವು ಅಂತಹ ಕೆಲಸವನ್ನು ಮಾಡುವುದಿಲ್ಲ. ಗಾಂಧಿ ಆದರ್ಶವನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ಧರ್ಮವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಇದನ್ನು ಸಹ ಜನರಿಗೆ ತಿಳಿಸಬೇಕು ಎಂದು ಮಾಹಿತಿ ನೀಡಿದರು.
ಪಾವಗಡದ ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರಿಗೆ ಪ್ರವೇಶ ನಿರಾಕರಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ, ಒಬ್ಬ ಸಂಸದರಿಗೆ ಹೀಗಾದರೆ ಹೇಗೆ? ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು. ಸಮಾಜದಲ್ಲಿರುವ ಕೆಟ್ಟ ಪದ್ಧತಿಗಳನ್ನು ತೊಲಗಿಸಬೇಕು. ಎಲ್ಲರೂ ಸೇರಿ ಇದರ ಬಗ್ಗೆ ಗಮನ ಸೆಳೆಯಬೇಕು. ಸರ್ಕಾರ ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು.