– ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಎಚ್ಚರಿಕೆ
ಬೆಂಗಳೂರು: ದೇಶದ ಭವಿಷ್ಯದ ದೃಷ್ಟಿಯಿಂದ ಜಮ್ಮು-ಕಾಶ್ಮೀರ ಮೇಲಿನ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಮಾರಕ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಭಾರತದೊಂದಿಗೆ ವಿಲೀವಾಗುವ ಸಂದರ್ಭದಲ್ಲಿ ವಿಶೇಷ ಸ್ಥಾನಮಾನವನ್ನು ಈ ಹಿಂದೆ ನೀಡಲಾಗಿತ್ತು. ಆದರೆ ಇಂದು ಈ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370, 35ಎ ಗಳನ್ನು ರದ್ದು ಮಾಡಿದ್ದಾರೆ. ಇದು ಜಮ್ಮು-ಕಾಶ್ಮೀರವನ್ನ ಅತಿಕ್ರಮಣ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಎಂದು ನಾನು ಆರೋಪ ಮಾಡುತ್ತಿದ್ದೇನೆ. ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಈ ನಿರ್ಧಾರ ಮಾಡಲಾಗಿದೆ. ಇಂತಹ ನಡೆ ದೇಶದ ಭವಿಷ್ಯಕ್ಕೆ, ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದರು.
ಜಮ್ಮು-ಕಾಶ್ಮೀರದಲ್ಲಿ ಯುದ್ಧದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ ನಾಯಕರನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ. ಯಾವುದೇ ಸಂಪರ್ಕ ವ್ಯವಸ್ಥೆಯನ್ನು ಕೂಡ ಕಲ್ಪಿಸಿಲ್ಲ. ದೂರವಾಣಿ, ಟಿವಿ ಎಲ್ಲವನ್ನೂ ಬಂದ್ ಮಾಡಿದ್ದಾರೆ. ಅಲ್ಲಿನ ಜನರ ಭಾವನೆಗಳಿಗೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಕುರಿತು ಪಕ್ಷದ ಹೈಕಮಾಂಡ್ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿಯುತ್ತಿರುವ ಸಂದರ್ಭದಲ್ಲಿ ಇಂತಹ ನಡೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದ್ದು, ನೋಟ್ ಬ್ಯಾನ್ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣ ಕ್ಯಾಂಟೀನ್ ಎಂದು ಬದಲಾಯಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಸಿಎಂ ಬಿಎಸ್ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದಾರೆ. ಆದರೆ ನಮ್ಮ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಇಂದಿರಾ ಹೆಸರಲ್ಲಿ ಕ್ಯಾಂಟೀನ್ ಯೋಜನೆ ಬಹಳ ಜನಪ್ರಿಯವಾಗಿದೆ. ಇಂದಿರಾ ಗಾಂಧಿ ಅವರ ಚಿತ್ರವೂ ಅದರಲ್ಲಿದೆ. ಯಾವುದೋ ಒಬ್ಬ ಬಿಜೆಪಿ ಮುಖಂಡನ ಮಾತು ಕೇಳಿ ಇಂದಿರಾ ಕ್ಯಾಂಟೀನ್ ಹೆಸರನ್ನು ಯಡಿಯೂರಪ್ಪ ಅವರು ಬದಲಾಯಿಸುವುದಿಲ್ಲ ಎಂಬ ನಂಬಿಕೆ ನನಗೆ ಇದೆ. ಒಂದು ವೇಳೆ ಇಂದಿರಾ ಹೆಸರು ತೆಗೆದು ಅನ್ನಪೂರ್ಣ ಎಂದು ಮಾಡಿದರೆ ನಮ್ಮ ಪಕ್ಷ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.