-ಯಡೂರು-ಕಲ್ಲೋಳ ಸೇತುವೆ ಜಲಾವೃತ
– ಮತ್ತೆ ಪ್ರವಾಹ ಭೀತಿ
ಬೆಳಗಾವಿ/ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ.
ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಹಾಗಾಗಿ ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ನದಿ ದಡದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಚಿಕ್ಕೋಡಿ ತಾಲೂಕಿನ ಕೆಳಹಂತದ ಯಡೂರು-ಕಲ್ಲೋಳ ಸೇತುವೆ ಜಲಾವೃತಗೊಂಡಿದೆ. ಸೇತುವೆ ಜಲಾವೃತಗೊಂಡಿದ್ದರಿಂದ ಪ್ರಯಾಣಿಕರು ಸುತ್ತುವರೆದು ಪ್ರಯಾಣಿಸುವಂತಾಗಿದೆ.
ಕೃಷ್ಣಾ ನದಿಗೆ ಸದ್ಯ 40 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದೆ. ಇತ್ತ ಕೊಯ್ನಾ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ಅಧಿಕ ನೀರು ಹರಿದು ಬರುತ್ತಿದೆ. ಹೀಗೆ ಮಳೆ ಮುಂದುವರಿದ್ರೆ ಮಂಗಳವಾರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಕೊಯ್ನಾ ಜಲಾಶಯದ ಆಡಳಿತ ಮಂಡಳಿ ಪ್ಲಾನ್ ಮಾಡಿಕೊಂಡಿದೆ.
ಕಳೆದ ತಿಂಗಳು ಸುರಿದ ಮಳೆಗೆ ಬೆಳಗಾವಿ ಜಿಲ್ಲೆ ಭಾಗಶಃ ಪ್ರವಾಹಕ್ಕೆ ತುತ್ತಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನಿರಾಶ್ರಿತ ಶಿಬಿರಗಳಿಂದ ಗ್ರಾಮಗಳಿಗೆ ಹಿಂದಿರುಗುತ್ತಿರುವ ಗ್ರಾಮಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ನಡುವೆ ಮತ್ತೆ ಕೊಯ್ನಾ ಜಲಾಶಯದಿಂದ ನೀರು ಬಿಡುತ್ತಿರುವ ಸುದ್ದಿ ಕೇಳಿ ಜನರು ಆತಂಕಕ್ಕೀಡಾಗಿದ್ದಾರೆ.