ಚಿತ್ರದುರ್ಗ: ಮುಜರಾಯಿ ದೇಗುಲ ಆರ್‍ಎಸ್‍ಎಸ್‍ಗೆ ಕೊಡುವ ಹುನ್ನಾರ ಎಂಬ ಆರೋಪಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳು ಆಯಾ ಜನಾಂಗದವರಿಂದ ನಿರ್ವಹಿಸಲ್ಪಡುತ್ತಿವೆ. ಜೈನ, ಪಾರ್ಸಿ, ಮುಸ್ಲಿಂ ಜನಾಂಗದಿಂದ ಆಯಾ ಧಾರ್ಮಿಕ ಕೇಂದ್ರ ನಿರ್ವಹಿಸುತ್ತಿದ್ದಾರೆ. ಹಿಂದೂ ದೇಗುಲಗಳನ್ನು ಹಿಂದೂಗಳ ಕೈಗೆ ಕೊಡಿ ಎಂಬ ಬೇಡಿಕೆ ಸಿಎಂ ಬಸವರಾಜ ಬೊಮ್ಮಾಯಿಯವರದ್ದಾಗಿದ್ದು ಈ ಬಗ್ಗೆ ಮಾತನಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸುತ್ತಾರೆಂದು ಭಾವಿಸಿದ್ದೆವು. ನಮ್ಮ ಯಾವ ಕೆಲಸವೂ ಸ್ವಾಗತಿಸುವ ಮಾನಸಿಕತೆ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿಷ್ಠಿತ ಕಾಗಿನೆಲೆ ಪೀಠದ ವಾರ್ಷಿಕ ಪ್ರಶಸ್ತಿ ಪ್ರಕಟ
ಮೇಕೆದಾಟು ಹೋರಾಟಕ್ಕೆ ಸರ್ಕಾರದಿಂದ ಕಡಿವಾಣ ಆರೋಪ ವಿಚಾರವಾಗಿ ಮಾತನಾಡಿ, ತುರ್ತು ಪರಿಸ್ಥಿತಿ ವೇಳೆ ಕೆಲವರು ಪ್ರಯತ್ನ ಮಾಡಿರಬಹುದು. ನಾವು ಎಲ್ಲರ ಎಲ್ಲಾ ಹಕ್ಕುಗಳನ್ನು ಗೌರವಿಸುತ್ತೇವೆ. ಕೊರೊನಾ ಕಾರಣಕ್ಕೆ ಒಂದಷ್ಟು ನಿಯಂತ್ರಣಕ್ಕೆ ಒಳಪಡಬೇಕಾಗುತ್ತೆ. ಜೀವ ಹೋದರೂ ಹೋರಾಟ ನಿಲ್ಲಿಸಲ್ಲ ಅಂದರೆ ತಡೆಯೋರು ಯಾರು? ಸಿದ್ದರಾಮಯ್ಯ ಅವರ ಶೈಲಿಯಲ್ಲಿ ಅವರು ಮಾತಾಡುತ್ತಾರೆ. 144 ಸೆಕ್ಷನ್ ಹಾಕಿದ್ದರು ಪಾದಯಾತ್ರೆ ಮಾಡುತ್ತೇವೆ ಅಂದರೆ ಅವರೇ ತೀರ್ಮಾನಿಸಲಿ ಎಂದರು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ
ಯಾರದ್ದೋ ಹೋರಾಟ ನಿಲ್ಲಿಸಲು ಕೊರೊನಾ ಬಂದಿದ್ದಲ್ಲ. ಸಿಎಂ ಸ್ಥಾನದಲ್ಲಿದ್ದವರು, ಸಿಎಂ ಆಗ್ತೀನಿ ಅನ್ನುವವರು ಗಮನಿಸಲಿ. ತುಂಬಾ ಜನ ಬುದ್ಧಿವಂತರು ಬೇರೆಯವರಿಗೆ ಬುದ್ಧಿ ಇಲ್ಲ ಅಂದುಕೊಂಡಿರುತ್ತಾರೆ. ಅದು ಅವರವರ ಮಾನಸಿಕತೆಗೆ ಸಂಬಂಧಪಟ್ಟ ವಿಚಾರವಾಗಿದೆ. ಕಟೀಲ್‍ಗೆ ರಾಜಕೀಯ ಬುದ್ಧಿ ಬೆಳೆದಿಲ್ಲ ಎಂದಿದ್ದ ಸಿದ್ದುಗೆ ಟಾಂಗ್ ನೀಡಿದರು.