ಮಂಗಳೂರು: ಭಯೋತ್ಪಾದಕರ ವಿರುದ್ಧ ವಾಯುಸೇನೆ ನಡೆಸಿದ ಸರ್ಜಿಕಲ್ ದಾಳಿ ಬಗ್ಗೆ ಸಚಿವ ಯು.ಟಿ.ಖಾದರ್ ಮತ್ತು ಸಿಎಂ ಕುಮಾರಸ್ವಾಮಿ ಅಪಸ್ವರ ಎತ್ತಿರುವ ವಿಚಾರದಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ದೇಶದ ಚಿಂತೆ, ಬಿಜೆಪಿಗೆ ಸೀಟಿನ ಚಿಂತೆ ಎಂದು ಖಾದರ್ ಬಾಲಿಶಃ ಹೇಳಿಕೆ ನೀಡಿದ್ದಾರೆ. ಬಿಜೆಪಿಗೆ ರಾಷ್ಟ್ರ ಮತ್ತು ಸೈನಿಕರ ಚಿಂತೆಯಾದರೆ, ಕಾಂಗ್ರೆಸಿಗೆ ಭಯೋತ್ಪಾದಕರ ಬಗ್ಗೆ ಚಿಂತೆ ಇರುವಂತಿದೆ ಎಂದು ಟಾಂಗ್ ನೀಡಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಪರವಾಗಿದ್ದರೆ ಮಹಾಘಟಬಂಧನ್ ಹೆಸರಲ್ಲಿ ಒಗ್ಗೂಡಿದ ನಾಯಕರು ಮಾತ್ರ ಸೇನೆಯ ವಿರುದ್ಧ ಮಾತನಾಡುತ್ತಿದ್ದಾರೆ. ಸೇನಾ ದಾಳಿಯ ಸಾಕ್ಷಿ ಕೇಳುತ್ತಿದ್ದಾರೆ ಎಂದು ಏರ್ ಸ್ಟ್ರೇಕ್ ಸಾಕ್ಷಿ ಕೇಳಿದ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ನಡೆಸಿದ ದಿಟ್ಟ ಕ್ರಮವನ್ನು ದೇಶಭಕ್ತರು ಸಂಭ್ರಮಿಸಿದರೆ, ಒಂದು ಕೋಮಿಗೆ ನೋವಾಗುತ್ತೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳುತ್ತಾರೆ. ಮುಖ್ಯಮಂತ್ರಿ ಬಾಯಲ್ಲಿ ಇಂಥ ಮಾತು ಬರಬಾರದಿತ್ತು ಎಂದರು. ಅಲ್ಲದೇ ಸಿಎಂ ಒಂದು ಕೋಮನ್ನು ಭಯೋತ್ಪಾದಕರ ಪರವಾಗಿದ್ದಾರೆ ಎಂದು ಹೇಳುತ್ತಿದ್ದಾರೆಯೇ ಅಂತ ಪ್ರಶ್ನೆ ಮಾಡಿದರು. ಸಿಎಂ ಕುಮಾರಸ್ವಾಮಿ ಈ ಮಾತು ಆಡಿದ್ದಾರೆ ಅಂದರೆ ನನಗೆ ನಂಬಲು ಆಗುತ್ತಿಲ್ಲ. ಅವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv