ಕಾರವಾರ: ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿ ಹೇಗಿದೆ ಅಂದ್ರೆ ನ್ಯಾಯಾಲಯದ ತೀರ್ಪನ್ನು ಸಹ ಗೌರವಿಸುತ್ತಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹೇಳಿಕೆ ಕಾಲಕಾಲಕ್ಕೆ ಸ್ಫೋಟಗೊಂಡಾಗ ಅದು ಬಿಜೆಪಿಗೆ ಅನುಕೂಲವಾಗುತ್ತೆ. ಕೆಲವೊಮ್ಮೆ ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡುತ್ತಿರುತ್ತಾರೆ. ಇದರಿಂದ ನಮ್ಮ ಪಕ್ಷಕ್ಕೆ ವರವಾಗುತ್ತದೆ ಎಂದರು. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು
ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹಿಂದೂ ದೇವರ ಜಾತ್ರೆಗಳಲ್ಲಿ ಇಸ್ಲಾಂ ಧರ್ಮದವರ ಅಂಗಡಿಗಳ ನಿರ್ಬಂಧ ಕುರಿತು ಮಾತನಾಡಿ, ಅಲ್ಲಲ್ಲಿ ಕೆಲವು ಕಡೆ ಇಂತಹ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳ ಬಗ್ಗೆ ಕಾಯ್ದೆಯನ್ನು ಈ ಹಿಂದೆ ತಂದವರು ಕಾಂಗ್ರೆಸ್‍ನವರು. ಈ ಹಿಂದೆ ಇದ್ದ ಕಾಯ್ದೆ ಅನುಷ್ಠಾನ ಆಗಿರಬಹುದೇ ಹೊರತು ನಾವು ಹೊಸದಾಗಿ ಕಾನೂನು ತಂದಿಲ್ಲ ಎಂದು ಕಾಂಗ್ರೆಸ್‍ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಉಳಿಯಬೇಕಾದ್ರೆ ಮೊದಲು ಸಿದ್ದರಾಮಯ್ಯರನ್ನು ವಜಾ ಮಾಡಿ: ಈಶ್ವರಪ್ಪ
ಎಲ್ಲ ಧರ್ಮದವರು ಸಮಾನರು, ನೆಮ್ಮದಿಯಿಂದ ಬದಕುವ ಕಲ್ಪನೆಗೆ ಒತ್ತುಕೊಟ್ಟು ಬಿಜೆಪಿ ಪಕ್ಷ ಕೆಲಸ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹ, ಧರ್ಮ ದ್ರೋಹ ಮಾಡುವಂತ ಪೋಸ್ಟ್‌ಗಳನ್ನು ಹಾಕಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.