ಹಾಸನ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಾಗ ಗುಡುಗು, ಸಿಡಿಲು ಬರುತ್ತೆ ಆ ಮೇಲೆ ತಣ್ಣಗಾಗುತ್ತದೆ. ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ ಎಂದು ಯತ್ನಾಳ್ ಅಸಮಾಧಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಪಕ್ಷದ ಕಾರ್ಯಕರ್ತರಲ್ಲಿ ಯಾವ ಗೊಂದಲ ಹಾಗೂ ಆಂತರಿಕ ಜಗಳವೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಚರ್ಚೆ, ಅಭಿಪ್ರಾಯ ಹೇಳುವುದು ಪ್ರಜಾಪ್ರಭುತ್ವದ ಒಂದು ಭಾಗ. ಬಹಳ ಖುಷಿಯಿಂದ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಡಿಸಿಎಂ ಪಟ್ಟಕ್ಕಾಗಿ ಶ್ರೀರಾಮುಲು ಲಾಬಿ
ಸರ್ವಸ್ಪರ್ಶ ನೀಡುವ ಬಜೆಟ್: ನಿನ್ನೆ ಕೇಂದ್ರ ಸರ್ಕಾರ ಮಂಡಿಸಿದ ಹಣಕಾಸು ಬಜೆಟ್ ಸರ್ವ ವ್ಯಾಪಿ ಹಾಗೂ ಸರ್ವ ಸ್ಪರ್ಶ ಬಜೆಟ್ ಎಂದು ಕರೆಯಲಾಗುತ್ತಿದೆ. ಈ ಬಜೆಟ್‍ನಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಕರ್ನಾಟಕವೂ ಅಭಿವೃದ್ಧಿಯಾಗುತ್ತದೆ ಎಂಬುವ ನಂಬಿಕೆಯಿದೆ. ಇದೊಂದು ಅದ್ಭುತವಾದ ಬಜೆಟ್ ಎಂದ ಅವರು ಆದರೆ ಸಾಂಕೇತಿಕವಾಗಿ ವಿರೋಧ ಪಕ್ಷಗಳು ಟೀಕಿಸುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಯಾವುದೇ ಕಾರ್ಯಕ್ರಮ ಆಗುತ್ತಿಲ್ಲ: ಸಂತೋಷ್ ಲಾಡ್