ಕೊಪ್ಪಳ: ಸರ್ಕಾರ ರೈತರ ಅನಕೂಲಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ರೈತರಿಗೆ ನೀರು ಸಿಗಲಿ ಅನ್ನೋ ಉದ್ದೇಶದಿಂದ ಸರ್ಕಾರ ಚೆಕ್ ಡ್ಯಾಂ ನಿರ್ಮಾಣ ಮಾಡುತ್ತದೆ. ಆದರೆ ಚೆಕ್ ಡ್ಯಾಂ ನಿರ್ಮಾಣದ ಹೆಸರಲ್ಲಿ ಗುತ್ತಿಗೆದಾರರು ಸರ್ಕಾರಕ್ಕೆ ಮಂಕು ಬೂದಿ ಎರಚಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ಬೆಂಬಲಿಗರು ಚೆಕ್ ಡ್ಯಾಂ ನಲ್ಲಿ ಕೋಟ್ಯಂತರ ಹಣ ಜೇಬಿಗಿಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
ಕುಷ್ಟಗಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನಿರ್ಮಾಣ ಮಾಡಿದ ಚೆಕ್ ಡ್ಯಾಂಗಳು ಹಳ್ಳ ಹಿಡಿದಿವೆ. ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಕುಷ್ಟಗಿಯಲ್ಲಿ ಗುತ್ತಿಗೆದಾರರು ಕಳಪೆ ಮಟ್ಟದ ಚೆಕ್ ಡ್ಯಾಂ ನಿರ್ಮಾಣ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಕೆಲವು ಹಳ್ಳಿಗಳಲ್ಲಿ ಕೇವಲ ಮಣ್ಣು ಅಗೆದು ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದೇವೆ ಎಂದು ಬೋಗಸ್ ಬಿಲ್ ಎತ್ತಿದ್ದಾರೆ. ಒಂದು ಹನಿ ನೀರಿಲ್ಲದೆ ಚೆಕ್ ಡ್ಯಾಂಗಳು ಒಣಗಿ ನಿಂತಿವೆ. ಕೆಲವು ಈಗಾಗಲೇ ಕಿತ್ತು ಹೋಗಿ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಚೆಕ್ ಡ್ಯಾಂ ನಿರ್ಮಾಣದ ಬಗ್ಗೆ ಕುಷ್ಟಗಿ ರೈತರು ಜಿಲ್ಲಾಡಳಿತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ಚೆಕ್ ಡ್ಯಾಂನ ಅವ್ಯವಹಾರದ ಬಗ್ಗೆ ಸಿ.ಓ.ಡಿ ತನಿಖೆಗೆ ರೈತರು ಆಗ್ರಹಿಸಿದ್ದಾರೆ.
Advertisement
Advertisement
ಇದು ಕೇವಲ ಕುಷ್ಟಗಿ ಕಥೆಯಲ್ಲ, ಕೊಪ್ಪಳ ಜಿಲ್ಲೆಯಲ್ಲಿ 2018-19 ರಲ್ಲಿ ಒಟ್ಟು 700ಕ್ಕೂ ಅಧಿಕ ಚೆಕ್ ಡ್ಯಾಂ ನಿರ್ಮಾಣವಾಗಿವೆ. ಆದರೆ ಒಂದು ಚೆಕ್ ಡ್ಯಾಂ ಕೂಡ ವ್ಯವಸ್ಥಿತವಾಗಿ ನಿರ್ಮಾಣ ಮಾಡಿಲ್ಲ. ಕುಷ್ಟಗಿ ತಾಲೂಕಿನ ರೈತರೆಲ್ಲ ಪತ್ರಿಕಾಗೋಷ್ಟಿ ನಡೆಸಿ ಇಡೀ ಜಿಲ್ಲೆಯ ಚೆಕ್ ಡ್ಯಾಂ ಹಗರಣ ಸಿ.ಓ.ಡಿ. ತನಿಖೆಗೆ ಆದೇಶ ಮಾಡಬೇಕೆಂದು ಆಗ್ರಹಿಸಿದರು. ಅಸಲಿಗೆ ಈ ಚೆಕ್ ಡ್ಯಾಂ ನಿರ್ಮಾಣದಲ್ಲಿ ಗುತ್ತಿಗೆದಾರರು ಜೇಬು ತುಂಬಿಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
Advertisement
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ್ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರೇ ಈ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದಂತೆ. 700 ಕ್ಕೂ ಅಧಿಕ ಚೆಕ್ ಡ್ಯಾಂ ನಿರ್ಮಾಣದ ಹೆಸರಲ್ಲಿ ಶಾಸಕರ ಬೆಂಬಲಿಗರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ರೈತ ಮುಖಂಡರು ಜಿಪಂ ಸಿ.ಇ.ಓ ಗೆ ಮನವಿ ಮಾಡಿದರೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಚೆಕ್ ಡ್ಯಾಂ ನಿರ್ಮಾಣ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಅದೇ ಗುತ್ತಿಗೆದಾರರಿಂದ ಚೆಕ್ ಡ್ಯಾಂ ಪುನರ್ ನಿರ್ಮಾಣ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.