ಕೊಪ್ಪಳ: ಭಾರಿ ವಾಹನ ಮತ್ತು ಸಾರಿಗೆ ಬಸ್ ಸಂಚಾರಕ್ಕೆ ಆ ಸೇತುವೆ ಸಮರ್ಥವಾಗಿಲ್ಲ ಅಂತಾ ಲೋಕೋಪಯೋಗಿ ಇಲಾಖೆ ಸರ್ಟಿಫಿಕೇಟ್ ನೀಡಿದೆ. ಆದ್ರೂ, ಇಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿಲ್ಲ. ಸ್ವಲ್ಪ ಯಾಮಾರಿದ್ರೂ ಅಪಾಯ ತಪ್ಪಿದ್ದಲ್ಲ.
ಹೌದು. ಕೊಪ್ಪಳ- ಬಳ್ಳಾರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್-ಕಂಪ್ಲಿ ಸೇತುವೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ನದಿಗೆ ಕಟ್ಟಲಾದ ಈ ಸೇತುವೆ ಸುಮಾರು 60 ವರ್ಷದಷ್ಟು ಹಳೆಯದು. ಈ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಿ ಅಂತ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತಕ್ಕೆ ಲೋಕೋಪಯೋಗಿ ಇಲಾಖೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
Advertisement
Advertisement
ಕಳೆದ ಕೆಲ ದಿನದ ಹಿಂದೆ ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಟ್ಟಾಗ, ಈ ಸೇತುವೆ ಮುಳುಗಡೆಯಾದ ನಂತರವಂತೂ ಮತ್ತಷ್ಟು ದುಃಸ್ಥಿತಿ ತಲುಪಿದೆ. ಇದ್ರಿಂದ ಇಲ್ಲಿನ ಜನ ಪ್ರಾಣ ಪಣಕ್ಕಿಟ್ಟು ಓಡಾಡಬೇಕಾದ ಸ್ಥಿತಿ ಎದುರಾಗಿದೆ ಅಂತ ಸ್ಥಳೀಯ ನಿವಾಸಿ ಆರತಿ ತಿಪ್ಪಣ್ಣ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
Advertisement
Advertisement
ಸದ್ಯದ ಸ್ಥಿತಿಯಲ್ಲಿ ಸೇತುವೆ ತಡೆಗೋಡೆಯ ಕೆಲ ಭಾಗ ಮುರಿದಿದೆ. ಕಬ್ಬಿಣದ ಸರಳು ಸಮೇತ ಸಾಕಷ್ಟು ಅವಶೇಷ ಹೊರಕ್ಕೆ ಬಂದು ಸೇತುವೆ ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆಗಳಿಲ್ಲ ಅಂತ ಲೋಕೋಪಯೋಗಿ ಅಧಿಕಾರಿ ತಿರುಮಲರಾವ್ ಕುಲಕರ್ಣಿ ಹೇಳುತ್ತಾರೆ.
ಒಟ್ಟಿನಲ್ಲಿ ಈ ಚಿಕ್ಕಜಂತಕಲ್-ಕಂಪ್ಲಿ ಸೇತುವೆ ಕುಸಿದು, ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮೊದಲೇ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv