ಕೊಪ್ಪಳ: ಸ್ಟೇನ್ ಲೆಸ್ ಸ್ಟೀಲ್‍ನಿಂದ ನಿರ್ಮಿಸಿದ ಶೌಚಾಯಗಳಿಗೆ ಪೂಜೆ ಮಾಡುವ ಮೂಲಕ ಕೊಪ್ಪಳದ ಸಾರ್ವಜನಿಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿ ನಗರಸಭೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕರ ಉಪಯೋಗಕ್ಕೆ ಎಂದು 10 ಲಕ್ಷ ರೂಪಾಯಿ ವೆಚ್ಚದಲ್ಲಿ 8 ಸ್ಟೇನ್ ಲೆಸ್ ಸ್ಟೀಲ್ ನಿಂದ ನಿರ್ಮಿಸಿರುವ ಶೌಚಾಲಯಗಳನ್ನು ಕೊಪ್ಪಳದ ನಗರಸಭೆಯಲ್ಲಿ ಇಡಲಾಗಿದೆ. ಈ ಶೌಚಾಲಯಗಳನ್ನು ಸಾರ್ವಜನಿಕರಿಗೆ ಉಪಯೋಗಿಸಲು ನೀಡದನ್ನು ಖಂಡಿಸಿ ಇಂದು ಮಂಜುನಾಥ ಗೋಂಡಬಳ ನೇತೃತ್ವದಲ್ಲಿ ಶೌಚಾಲಯಗಳಿಗೆ ಪೂಜೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಕಳೆದ ಒಂಬತ್ತು ತಿಂಗಳ ಹಿಂದೆ ಶೌಚಾಲಯಗಳು ರೆಡಿಯಾಗಿದ್ದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕ ಉಪಯೋಗಕ್ಕೆ ಬಾರದೆ ಹೋಗಿವೆ. ಕಳೆದ 3 ತಿಂಗಳಿಂದ ಹಲವೆಡೆ ಶೌಚಾಲಯಗಳನ್ನು ಹಾಕಿರುವ ನಗರಸಭೆ ಅಧಿಕಾರಿಗಳು ಅವುಗಳಿಗೆ ಬೇಲಿಯನ್ನು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೌಚಾಲಯ ಉಪಯೋಗಿಸಲು ಬಿಡಿ ಇಲ್ಲವೆ ಅದನ್ನು ಬೀದಿ ಬದಿ ಗುಡಿಯನ್ನಾಗಿ ಪರಿವರ್ತನೆ ಮಾಡಿ ಎಂದು ಒತ್ತಾಯಿಸಿ ನಗರಸಭೆಯ ವಿರುದ್ಧ ದಿಕ್ಕಾರವನ್ನು ಕೂಗಿ ಸಿಹಿ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.