ಕೋಲ್ಕತ್ತಾ: ಮಹಿಳೆಯೊಬ್ಬಳ ಹುಟ್ಟುಹಬ್ಬದ (Birthday) ದಿನವೇ ಆಕೆಯ ಮೇಲೆ ಇಬ್ಬರು ಪರಿಚಯಸ್ಥರು ಸೇರಿ ಸಾಮೂಹಿಕ ಅತ್ಯಾಚಾರ (Gang-Rape) ಎಸಗಿರುವುದು ಕೋಲ್ಕತ್ತಾದಲ್ಲಿ (Kolkata) ನಡೆದಿದೆ.
ಶುಕ್ರವಾರ ನಗರದ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಅತ್ಯಾಚಾರ ನಡೆದಿದೆ. ಕೃತ್ಯ ಎಸಗಿ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು
ಹರಿದೇವ್‌ಪುರದ ಮಹಿಳೆಯನ್ನು ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ಚಂದನ್, ದೀಪ್ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಳಿಕ ಶನಿವಾರ ಬೆಳಗ್ಗೆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು.
ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ, ಮಹಿಳೆಗೆ ಚಂದನ್ ಹಲವು ದಿನಗಳಿಂದ ಪರಿಚಯವಾಗಿದ್ದ. ಆತ ತನ್ನನ್ನು ದಕ್ಷಿಣ ಕೋಲ್ಕತ್ತಾದಲ್ಲಿರುವ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ. ಅಲ್ಲದೇ ಆತ ದೀಪ್‌ನನ್ನು ಪರಿಚಯ ಮಾಡಿಕೊಟ್ಟಿದ್ದ. ಮಹಿಳೆಯನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ರು ಎಂದು ಉಲ್ಲೇಖಿಸಲಾಗಿದೆ.
ಜೂನ್ 25 ರಂದು ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜು ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಕಾಲೇಜಿನ ಹಳೆಯ ವಿದ್ಯಾರ್ಥಿ ಮೋನೋಜಿತ್ ಮಿಶ್ರಾನನ್ನು ಬಂಧಿಸಲಾಗಿತ್ತು. ಇನ್ನೂ ಕಳೆದ ವರ್ಷ ಆರ್‌ಜಿಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿರುವ ಅತ್ಯಾಚಾರ, ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಆರೋಪ – ಎಸ್‌ಎಎಫ್ ಪೊಲೀಸ್ ಕಾನ್‌ಸ್ಟೆಬಲ್ ಅರೆಸ್ಟ್