ಕೋಲ್ಕತ್ತಾ: ಸೊಸೆ ತನ್ನ ಅತ್ತೆಗೆ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆಯೊಂದು ದಕ್ಷಿಣ ಕೋಲ್ಕತ್ತಾದ ಗರಿಯಾ ಎಂಬ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಅತ್ತೆ ಯಶೋದಾ ಪಾಲ್ ಅವರಿಗೆ ಸೊಸೆ ಸ್ವಪ್ನ ಪಾಲ್ ಹೊಡೆಯುವ ದೃಶ್ಯವನ್ನು ನೆರೆಮನೆಯವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?: ಆರೋಪಿ ಸೊಸೆ ಸ್ವಪ್ನ ಪಾಲ್ ತನ್ನ ಅತ್ತೆ 75 ವರ್ಷದ ಯಶೋದಾ ಅವರ ಕೂದಲನ್ನು ಎಳೆದಾಡಿ ಮುಖಕ್ಕೆ ಹೊಡೆದಿದ್ದಾಳೆ. ಈ ದೃಶ್ಯವನ್ನು ನೆರೆಮನೆಯರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಕೆಲ ಗಂಟೆಗಳಲ್ಲೇ ಈ ವಿಡಿಯೋವನ್ನು 25 ಸಾವಿರ ಮಂದಿ ಶೇರ್ ಮಾಡಿದ್ದಾರೆ.
ನನ್ನ ಅನುಮತಿಯಿಲ್ಲದೇ ಯಾಕೆ ಹೂ ಕಿತ್ತೆ ಅಂತ ಕಿರುಚಾಡಿಕೊಂಡ ಸೊಸೆ, ವಯಸ್ಸು ನೋಡದೇ ಅತ್ತೆಗೆ ಚೆನ್ನಾಗಿ ಥಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಹಲವು ಮಂದಿ ಸೊಸೆಯ ವರ್ತನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಸೊಸೆಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
A video was viral today in which a elderly lady was tortured by her daughter in law. Team #BANSDRONI PS traced the tormentor and arrested her. pic.twitter.com/wSUrenYWGc
— DCP JADAVPUR DIV KOLKATA (@KPSouthsubnDiv) May 30, 2018
ವಯೋವೃದ್ಧೆ ಯಶೋದಾ ಪಾಲ್ ಅವರಿಗೆ ಮರೆವಿನ ಕಾಯಿಲೆ ಇದೆ. ಹೀಗಾಗಿ ಅವರು ಸೊಸೆಯ ಥಳಿತಕ್ಕೊಳಗಾಗಿದ್ದಾರೆ. ತಮ್ಮ ಗಾರ್ಡನ್ ನಿಂದ ಹೂ ಕೀಳುವಾಗ ಸೊಸೆಯ ಅನುಮತಿ ಪಡೆಯಲಿಲ್ಲ. ಇದರಿಂದ ಸಿಟ್ಟಿಗೆದ್ದ ಸೊಸೆ, ಅತ್ತೆಯ ಮೇಲೆ ಕ್ರೂರ ವರ್ತನೆ ತೋರಿದ್ದಾಳೆ. ಅಲ್ಲದೇ ಅತ್ತೆಗೆ ಪ್ರತಿನಿತ್ಯ ಸೊಸೆ ದೈಹಿಕ ಹಿಂಸೆ ಕೊಡುತ್ತಿದ್ದಾಳೆ. ಯಶೋದಾ ಪಾಲ್ ಅವರ ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು ಅಂತ ಕೋಲ್ಕತ್ತಾ ಪೊಲೀಸರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ಸ್ಡ್ರೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ತೆ ಯಶೋದಾ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಸೊಸೆಯನ್ನು ಪೊಲೀಸರು ಬುಧವಾರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.