Connect with us

Cricket

ಗಂಗೂಲಿ ಹೊಗಳಿದ ಕೊಹ್ಲಿ ವಿರುದ್ಧ ಕಿಡಿಕಾರಿದ ಗವಾಸ್ಕರ್

Published

on

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊಗಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ. ಈ ಪಂದ್ಯದ ಗೆಲುವಿನ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊಗಳಿದ ಕೊಹ್ಲಿ ವಿರುದ್ಧ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಕೋಲ್ಕತ್ತಾದಲ್ಲಿ ಸರಣಿ ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಭಾರತದಲ್ಲಿ ಗೆಲುವಿನ ಸಂಸ್ಕೃತಿ ಹುಟ್ಟಿಹಾಕಿದ್ದಕ್ಕೆ ಧನ್ಯವಾದಗಳು. ಭಾರತ ತಂಡದ ಗೆಲುವು ಆರಂಭವಾಗಿದ್ದು, ದಾದಾ ಕಟ್ಟಿದ ಟೀಂನಿಂದ. ಅಂದು ಅವರು ಆರಂಭ ಮಾಡಿದ್ದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿ ಸೌರವ್ ಗಂಗೂಲಿ ಅವರನ್ನು ಪ್ರಶಂಸಿಸಿದ್ದರು.

ಕೊಹ್ಲಿ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮಾಜಿ ಆಟಗಾರ ಸುನಿಲ್ ಗವಾಸ್ಕಾರ್, ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಬಹಳ ಸಂತೋಷವಾಗಿದೆ. ಆದರೆ ವಿರಾಟ್ ಕೊಹ್ಲಿ ಅವರು ಭಾರತ, 1970 ಮತ್ತು 1980 ರ ಸಮಯದಲ್ಲಿಯೂ ಗೆಲುವು ಸಾಧಿಸಿತ್ತು ಎಂಬುದನ್ನು ಮರೆತಿದ್ದಾರೆ. ಆ ಸಮಯದಲ್ಲಿ ಕೊಹ್ಲಿ ಹುಟ್ಟಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಭಾರತದ ತಂಡದ ಗೆಲುವಿನ ಪಯಣ ಶುರುವಾಗಿದ್ದು ದಾದಾ ತಂಡದಿಂದ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈಗ ಗಂಗೂಲಿ ಅಧ್ಯಕ್ಷ ಎಂಬುದು ಎಲ್ಲರಿಗೂ ಗೊತ್ತು. ಈ ಕಾರಣಕ್ಕೆ ಕೊಹ್ಲಿ ಈ ಹೇಳಿಕೆಯನ್ನು ನೀಡಿರಬಹುದು. ಆದರೆ ಭಾರತ ಈ ಹಿಂದೆಯೂ ಕೂಡ ವಿಶ್ವಕಪ್ ಗೆದ್ದಿತ್ತು. ಹೊರ ದೇಶಗಳಿಗೆ ಹೋಗಿ ಅಲ್ಲಿ ಪಂದ್ಯಗಳನ್ನು ಗೆದ್ದು ಬಂದಿತ್ತು ಎಂಬುದನ್ನು ಕೊಹ್ಲಿ ಮರೆಯಬಾರದು ಎಂದು ಗವಾಸ್ಕಾರ್ ಹೇಳಿದ್ದಾರೆ.

ಕೆಲವರು ಭಾರತದ ತಂಡದ ಕ್ರಿಕೆಟ್ ಆರಂಭವಾಗಿದ್ದು 2000 ವರ್ಷದಿಂದ ಎಂಬಂತೆ ಮಾತನಾಡುತ್ತಾರೆ. ನಮ್ಮ ತಂಡ ಅದಕ್ಕೂ ಮುನ್ನ ವಿಶ್ವಕಪ್ ಗೆದ್ದಿತ್ತು. ಭಾರತ 70 ರ ದಶಕದಲ್ಲಿಯೇ ವಿದೇಶಕ್ಕೆ ಹೋಗಿ ಟೂರ್ನಿಯನ್ನು ಆಡಿ ಬಂದಿತ್ತು. ಅಲ್ಲಿ ಸರಣಿಯನ್ನು ಗೆದ್ದು ತಂದಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ 1983 ರ ವಿಶ್ವಕಪ್ ಗೆದ್ದಿತ್ತು ಎಂದು ನೆನಪಿಸಿ ಅಸಮಾಧಾನ ಹೊರಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *