– ಕೋಲ್ಕತ್ತಾ ಕಾಲ್ತುಳಿತ ದುರಂತ ಆಗಿದ್ದು ಹೇಗೆ?
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಶನಿವಾರ ಸಂಜೆ ದುರ್ಗಾ ಪೂಜಾ ಮಂಟಪವೊಂದರಲ್ಲಿ ಉಂಟಾದ ಜನದಟ್ಟಣೆಯಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಸುಮಾರು 25 ಜನರು ಗಾಯಗೊಂಡಿದ್ದಾರೆ. ಈ ದುರಂತವು ಬೃಹತ್ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನ ನಿರ್ವಹಿಸುವಲ್ಲಿನ ಸವಾಲುಗಳು ಮತ್ತು ಸುರಕ್ಷತಾ ವ್ಯವಸ್ಥೆಗಳ ಅಗತ್ಯತೆಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಏಳುವಂತೆ ಮಾಡಿದೆ.
ಉತ್ತರ ಕೋಲ್ಕತ್ತಾದ ಛೋರ್ಬಾಗನ್ ಸರ್ಬಜನಿನ್ ದುರ್ಗಾ ಪೂಜಾ ಮಂಟಪದಲ್ಲಿ ಈ ಘಟನೆ ಸಂಭವಿಸಿದೆ. ಭಾರಿ ಮಳೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಂಟಪ ವೀಕ್ಷಣೆಗೆ ಏಕಾಏಕಿ ಜನ ನುಗ್ಗಿದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂದು ವರದಿಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂಜೆ ಮಳೆ ಆರಂಭವಾಗುತ್ತಿದ್ದಂತೆ ಮಂಟಪದ ಹೊರಭಾಗದಲ್ಲಿ ಕಾಯುತ್ತಿದ್ದ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಒಳಕ್ಕೆ ನುಗ್ಗಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ಜನರ ಒತ್ತಡದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ದುರಂತ ಸಂಭವಿಸಿದೆ. ಘಟನೆಯ ನಿಖರ ಕಾರಣ ಮತ್ತು ಹೊಣೆಗಾರಿಕೆ ಕುರಿತು ತನಿಖೆ ನಡೆಯುತ್ತಿದೆ.
ಭಾರತದಲ್ಲಿ ಇಂತಹ ದುರಂತಗಳು ಹೊಸದೇನಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) 2014ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಭವಿಸಿರುವ ಬಹುತೇಕ ಜನಸಂದಣಿ ದುರಂತಗಳು ಧಾರ್ಮಿಕ ಸ್ಥಳಗಳಲ್ಲೇ ನಡೆದಿವೆ. ಹಾಗಾದರೆ, ಸಾಮಾನ್ಯವಾಗಿ ಶಾಂತವಾಗಿರುವ ಜನಸಂದಣಿ ಏಕಾಏಕಿ ಅಪಾಯಕಾರಿಯಾಗುವುದು ಹೇಗೆ? ಇಂತಹ ದುರಂತಗಳನ್ನ ತಡೆಯಲು ಆಡಳಿತ ಮತ್ತು ಕಾರ್ಯಕ್ರಮ ಆಯೋಜಕರು ಯಾವ ಕ್ರಮಗಳನ್ನು ಕೈಗೊಳ್ಳಬೇಕು?
ಕಾಲ್ತುಳಿತ ದುರಂತಕ್ಕೆ ಕಾರಣವೇನು?
ಸಾಮಾನ್ಯವಾಗಿ ಇಂತಹ ಘಟನೆಗಳನ್ನ ‘ಕಾಲ್ತುಳಿತ’ ಎಂದು ಕರೆಯಲಾಗುತ್ತದೆ. ಜನರು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಂದೇ ಸ್ಥಳದಲ್ಲಿ ಸೇರಿಕೊಂಡಾಗ, ತಮ್ಮ ದೇಹದ ಚಟುವಟಿಕೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಾತ್ಕಾಲಿಕ ವೇದಿಕೆಗಳು, ಕ್ಯೂನಲ್ಲಿ ನಿಲ್ಲುವುದು, ಸಮರ್ಪಕವಲ್ಲದ ಬ್ಯಾರಿಕೇಡ್‌ಗಳು, ಕಡಿಮೆ ಬೆಳಕಿನಲ್ಲಿ ಗೋಚರಿಸುವ ಪ್ರದೇಶಗಳಲ್ಲಿನ ಮೆಟ್ಟಿಲುಗಳು, ಕಿರಿದಾದ ಪ್ರವೇಶ, ಕಿರಿದಾದ ಎಕ್ಸಿಟ್‌ಗಳು ಇಂತಹ ಅಪಾಯಕ್ಕೆ ಕಾರಣವಾಗಬಹುದು. ಬೆಂಕಿ ಅವಘಡ, ವಿದ್ಯುತ್ ವೈಫಲ್ಯ, ಭದ್ರತಾ ಆತಂಕ ಮತ್ತು ಜನಸಂದಣಿಯನ್ನ ಸರಿಯಾಗಿ ನಿರ್ವಹಿಸದಿರುವುದೂ ದುರಂತಕ್ಕೆ ಕಾರಣವಾಗಬಹುದು.
ದುರ್ಗಾ ಪೂಜೆಯಂತಹ ಉತ್ಸವಗಳಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿರುತ್ತದೆ. ಸಾವಿರಾರು ಜನರು ಒಂದು ಮಂಟಪದಿಂದ ಮತ್ತೊಂದು ಮಂಟಪಕ್ಕೆ ತೆರಳುತ್ತಿರುತ್ತಾರೆ. ಎಲ್ಲರಿಗೂ ಟಿಕೆಟ್ ಅಥವಾ ನಿಗದಿತ ಸಮಯದ ಪ್ರವೇಶ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ನಿರ್ದಿಷ್ಟ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎಷ್ಟು ಜನರು ಸೇರುತ್ತಾರೆ ಎಂಬುದನ್ನು ಅಂದಾಜಿಸುವುದು ಕಷ್ಟವಾಗುತ್ತದೆ. ಸೂಕ್ತ ವ್ಯವಸ್ಥೆಗಳಿಲ್ಲದಿದ್ದರೆ ಜನದಟ್ಟಣೆ ಹೆಚ್ಚಬಹುದು ಅಥವಾ ನೂಕುನುಗ್ಗಲು ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಒತ್ತಡದಿಂದ ಉಸಿರುಗಟ್ಟುತ್ತದೆ, ಒಬ್ಬರಿಗೊಬ್ಬರು ಒತ್ತಿಕೊಂಡಾಗ ಎದೆಯ ಭಾಗದ ಮೇಲೆ ತೀವ್ರ ಒತ್ತಡ ಉಂಟಾಗಿ ಉಸಿರಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದರಿಂದ ಸಾವು ಸಂಭವಿಸುತ್ತದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಕೋಲ್ಕತ್ತಾದಲ್ಲಿ ನಡೆದಿದ್ದೇನು?
ಘಟನೆಗೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಕೋಲ್ಕತ್ತಾದ ಛೋರ್ಬಾಗನ್ ಮಂಟಪದಲ್ಲಿ ಜನಸಂದಣಿಯ ಅಪಾಯವನ್ನು ಹೆಚ್ಚಿಸುವ ಹಲವು ಅಂಶಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಸಂಜೆ ಮಳೆ ಆರಂಭವಾದಾಗ ಮಂಟಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಳೆಯಿಂದಾಗಿ ಹೊರಭಾಗದಲ್ಲಿ ಕಾಯುತ್ತಿದ್ದ ಜನರು ಏಕಾಏಕಿ ಮಂಟಪಕ್ಕೆ ನುಗ್ಗಿದ್ದಾರೆ. ಇದರಿಂದ ಜನಸಂಖ್ಯೆ ಹೆಚ್ಚಾಗಿ ಒತ್ತಡ ಸೃಷ್ಟಿಯಾಗಿದೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಜನರು ಮುಂದಕ್ಕೆ ಒತ್ತಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಈ ಮಧ್ಯೆ ಮಂಟಪದ ಆಯೋಜಕರು ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸಿದ್ದು, ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೂಜಾ ಸಮಿತಿಯ ಸದಸ್ಯರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಸೇರಿ 7 ಮಂದಿಯನ್ನ ಬಂಧಿಸಲಾಗಿದೆ. ಇತರ 14 ಮಂದಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚಳ ಆಗಬಹುದು ಎಂದು ಬಂಗಾಳ ಪೊಲೀಸರು ಹೇಳಿದ್ದಾರೆ.
ಜನರ ವರ್ತನೆ ದುರಂತಕ್ಕೆ ಹೇಗೆ ಕಾರಣವಾಗುತ್ತೆ?
ಜನಸಂದಣಿ ದುರಂತಗಳನ್ನು ತಡೆಯಲು ಜನರ ವರ್ತನೆಯನ್ನ ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಏಕೆಂದ್ರೆ ಜನಸಂದಣಿಯಲ್ಲಿರುವ ವ್ಯಕ್ತಿಯ ವರ್ತನೆಯ ಮೇಲೆ ಸುತ್ತಮುತ್ತಲಿನ ಜನರ ಚಲನವಲನಗಳು ಪ್ರಭಾವ ಬೀರುತ್ತವೆ. ಉದಾಹರಣೆಗೆ, ಕೆಲವರು ಬ್ಯಾರಿಕೇಡ್ ಹಾರಿ ಮುಂದೆ ಹೋಗಲು ಪ್ರಯತ್ನಿಸಿದರೆ, ಅವರನ್ನು ಕಂಡು ಇತರರೂ ಅದೇ ರೀತಿ ಮಾಡಲು ಮುಂದಾಗಬಹುದು. ಇದರಿಂದ ನಿರ್ದಿಷ್ಟ ಪ್ರದೇಶದಲ್ಲಿ ಜನರ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತದೆ ಎಂದು NDMA ವರದಿ ತಿಳಿಸುತ್ತದೆ.
ಗೊಂದಲ ಸೃಷ್ಟಿಯಾಗುವುದು ಯಾವಾಗ?
01: ಜನಸಂದಣಿಯಲ್ಲಿರುವವರು ಯಾವಾಗಲೂ ವಿವೇಚನೆ ಕಳೆದುಕೊಂಡು ವರ್ತಿಸುತ್ತಾರೆ ಎಂದರ್ಥವಲ್ಲ. ತಮಗೆ ದೊರೆಯುವ ಮಾಹಿತಿ ಮತ್ತು ಸುತ್ತಮುತ್ತಲಿನ ಜನರ ವರ್ತನೆಯನ್ನ ಆಧರಿಸಿ ಅವರು ಪ್ರತಿಕ್ರಿಯಿಸುತ್ತಾರೆ. ಉದಾಹರಣೆಗೆ, ದೇವಸ್ಥಾನವೊಂದರಲ್ಲಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ, ಕೆಲವರು ಬೇಗನೆ ಒಳಗೆ ಹೋಗಲು ಬ್ಯಾರಿಕೇಡ್ ನೆಗೆಯಬಹುದು. ಅವರನ್ನು ಅನುಸರಿಸಿ ಮತ್ತಷ್ಟು ಜನರು ಮುಂದುವರಿದರೆ, ಅಷ್ಟೊಂದು ಜನರನ್ನು ಸುರಕ್ಷಿತವಾಗಿ ನಿರ್ವಹಿಸಲು ವಿನ್ಯಾಸಗೊಳಿಸದ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚುತ್ತದೆ.
02: ಧ್ವನಿವರ್ಧಕದ ಮೂಲಕ ಮಾಡುವ ಪ್ರಕಟಣೆಗಳೂ ಕೆಲವೊಮ್ಮೆ ಅನಿರೀಕ್ಷಿತ ಪರಿಣಾಮ ಉಂಟುಮಾಡಬಹುದು. ಜನರನ್ನು ಚದುರಿಸಲು ಅಥವಾ ಅಪಾಯದ ಬಗ್ಗೆ ಎಚ್ಚರಿಸಲು ನೀಡುವ ಸೂಚನೆಗಳು ಸ್ಪಷ್ಟವಾಗಿರದಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ಒಟ್ಟಿಗೇ ನುಗ್ಗುತ್ತಾರೆ. ಸುರಕ್ಷಿತ ನಿರ್ಗಮನ ಮಾರ್ಗಗಳ ವ್ಯವಸ್ಥೆ ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು.
03: ತಪ್ಪಾದ ಜನನಿಯಂತ್ರಣ ಕ್ರಮಗಳು ಕೂಡ ಅಪಾಯವನ್ನು ಹೆಚ್ಚಿಸಬಹುದು. ಉದಾಹರಣೆಗೆ, ನಿಯಂತ್ರಣ ತಪ್ಪಿದ ಗುಂಪೊಂದನ್ನು ಪೊಲೀಸರು ಒಂದು ದಿಕ್ಕಿಗೆ ಓಡಿಸಿದಾಗ, ವಿರುದ್ಧ ದಿಕ್ಕಿನಿಂದ ಮತ್ತೊಂದು ಗುಂಪು ಬರುತ್ತಿದ್ದರೆ, ಎರಡೂ ಗುಂಪುಗಳು ಮುಖಾಮುಖಿಯಾಗಿ ಡಿಕ್ಕಿಯಾಗುವ ಸಾಧ್ಯತೆ ಇದೆ. ಇದರಿಂದ ತೀವ್ರ ಜನದಟ್ಟಣೆ ಮತ್ತು ಒತ್ತಡ ಉಂಟಾಗಬಹುದು.
ಹೀಗಾಗಿ, ಜನಸಂದಣಿಯನ್ನು ನಿಯಂತ್ರಿಸಲು ಕೇವಲ ಬಲಪ್ರಯೋಗ ಅವಲಂಬಿಸುವ ಬದಲು, ಸ್ಪಷ್ಟ ಸಂವಹನ, ಜನರ ಸಹಕಾರ ಮತ್ತು ಸ್ಥಳೀಯ ಮಟ್ಟದ ಪರಿಣಾಮಕಾರಿ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಜನಸಂದಣಿ ನಿರ್ವಹಣೆ ಕುರಿತ ಅಧ್ಯಯನಗಳು ಸೂಚಿಸುತ್ತವೆ.
ಹಿಂದಿನ ದುರಂತಗಳು ನೀಡುವ ಎಚ್ಚರಿಕೆ ಏನು?
ಭಾರತದಲ್ಲಿ ಈ ಹಿಂದೆ ಸಂಭವಿಸಿದ ಹಲವು ಪ್ರಮುಖ ಜನಸಂದಣಿ ದುರಂತಗಳಲ್ಲಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ ಹಲವು ಸಮಸ್ಯೆಗಳನ್ನ ಗುರುತಿಸಿದೆ. ಅದೇ ತಪ್ಪುಗಳು ಕೋಲ್ಕತ್ತಾ ದುರಂತದಲ್ಲಿ ಮತ್ತೆ ಸಂಭವಿಸಿದೆ. ಆ ದುರಂತಗಳು ಯಾವುವು ಅಂತಾ ನೋಡೋದಾದ್ರೆ…
* 2003ರ ನಾಸಿಕ್ ಕುಂಭಮೇಳ
ಮಹಾರಾಷ್ಟ್ರದ ನಾಸಿಕ್‌ನಲ್ಲಿ 2003ರ ಆಗಸ್ಟ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ 29 ಯಾತ್ರಿಕರು ಮೃತಪಟ್ಟಿದ್ದರು. ಈ ಘಟನೆಯ ಕುರಿತು ನಡೆದ ಮ್ಯಾಜಿಸ್ಟೀರಿಯಲ್ ತನಿಖೆಯಲ್ಲಿ ಬ್ಯಾರಿಕೇಡ್‌ಗಳ ಬಳಿ ಉಂಟಾದ ಜನರ ಒತ್ತಡ, ಜನರು ಏಕಾಏಕಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ್ದು, ವಿವಿಧ ದಿಕ್ಕಿಗೆ ಚಲಿಸುತ್ತಿದ್ದ ಜನ ಅದೇ ಮಾರ್ಗದಲ್ಲಿ ನುಗ್ಗಿದ್ದು ದುರಂತಕ್ಕೆ ಕಾರಣವಾಗಿತ್ತು.
* 2005ರ ಮಾಂಧರ್‌ದೇವಿ ಯಾತ್ರೆ
ಮಹಾರಾಷ್ಟ್ರದ ವೈ ಸಮೀಪದ ಮಾಂಧರ್‌ದೇವಿಯಲ್ಲಿ 2005ರ ಜನವರಿಯಲ್ಲಿ ನಡೆದ ಕಾಳುಬಾಯಿ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ 293 ಮಂದಿ ಮೃತಪಟ್ಟಿದ್ದರು. ನಿರೀಕ್ಷೆಗೂ ಮೀರಿದ ಜನಸಂಖ್ಯೆ ಒಂದೇ ಕಡೆ ಸೇರಿದ್ದು, ದೇವಾಲಯದ ಸುತ್ತಲಿನ ಸ್ಥಳಾವಕಾಶದ ಕೊರತೆ, ಕಿರಿದಾದ ದಾರಿ, ಧ್ವನಿವರ್ಧಕ ವ್ಯವಸ್ಥೆಗಳ ಅಭಾವ, ಕಳಪೆ ಮೂಲಸೌಕರ್ಯ ಮತ್ತು ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ದುರಂತಕ್ಕೆ ಕಾರಣವಾಗಿದ್ದವು.
ಜನಸಂದಣಿಯನ್ನ ಸುರಕ್ಷಿತವಾಗಿ ನಿರ್ವಹಿಸುವುದು ಹೇಗೆ?
ಇಂತಹ ದುರಂತಗಳನ್ನು ಮುಂಚಿತ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನದ ಮೂಲಕ ಬಹುತೇಕ ಸಂದರ್ಭಗಳಲ್ಲಿ ತಡೆಯಬಹುದು ಎಂದು NDMA ಹೇಳುತ್ತದೆ.
* ಜನರ ಸಂಖ್ಯೆಯನ್ನು ಮುಂಚಿತವಾಗಿ ಅಂದಾಜಿಸಬೇಕು.
* ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವೇಶ ನೀಡಬೇಕು.
* ಅಗತ್ಯವಿದ್ದಾಗ ಪ್ರವೇಶವನ್ನು ನಿಯಂತ್ರಿಸಬೇಕು.
* ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗಗಳನ್ನ ರೂಪಿಸಬೇಕು.
* ಕಾಯುವ ಸ್ಥಳಗಳಲ್ಲೂ ಸುರಕ್ಷತಾ ವ್ಯವಸ್ಥೆ ಇರಬೇಕು.
* ತುರ್ತು ಪರಿಸ್ಥಿತಿಯಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು.
ಮುನ್ನೆಚ್ಚರಿಕೆಯೇ ಅಗತ್ಯ
ಕೋಲ್ಕತ್ತಾದ ದುರ್ಗಾ ಪೂಜಾ ಮಂಟಪದಲ್ಲಿ ಸಂಭವಿಸಿದ ದುರಂತವು ಜನಸಂದಣಿಯನ್ನ ನಿರ್ವಹಿಸುವಲ್ಲಿ ಮುನ್ನೆಚ್ಚರಿಕೆ ಮತ್ತು ಸೂಕ್ತ ಯೋಜನೆ ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಜನಸಂದಣಿ ಅಪಾಯಕಾರಿ ಮಟ್ಟ ತಲುಪಿದ ನಂತರ ಅದನ್ನು ನಿಯಂತ್ರಿಸಲು ಪ್ರಯತ್ನಿಸುವುದಕ್ಕಿಂತ, ಆ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದೇ ನಿಜವಾದ ಜನಸಂದಣಿ ನಿರ್ವಹಣೆ. ಸೂಕ್ತ ಯೋಜನೆ, ಜನರ ಸಂಖ್ಯೆ ಮೇಲಿನ ನಿಯಂತ್ರಣ, ಸ್ಪಷ್ಟ ಸಂವಹನ, ಸುರಕ್ಷಿತ ಮಾರ್ಗಗಳು ಮತ್ತು ವಿವಿಧ ಇಲಾಖೆಗಳ ನಡುವಿನ ಸಮನ್ವಯ ಇದ್ದರೆ, ದೊಡ್ಡ ಧಾರ್ಮಿಕ ಉತ್ಸವಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಹೆಚ್ಚು ಸುರಕ್ಷಿತವಾಗಿ ನಡೆಸಬಹುದು ಎನ್ನುತ್ತಾರೆ ತಜ್ಞರು.
