ಬೆಂಗಳೂರು: ಕೋಲಾರ ಮೂಲದ ಯೋಧರೊಬ್ಬರು ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಜೊತೆ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.
ಬಂಗಾರ ಪೇಟೆ ಗ್ರಾಮದ 26 ವರ್ಷದ ವೀರ ಯೋಧ ಪ್ರಶಾಂತ್ ಹುತಾತ್ಮ ಯೋಧರಾಗಿದ್ದು, ಸೆವೆಂಟೀನ್ ಮದ್ರಾಸ್ ರೆಜಿಮೆಂಟ್‍ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಶಾಂತ್ ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರೊಂದಿಗಿನ ಕಾಳಗದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.
Advertisement
Advertisement
ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ವಿಮಾನ ನಿಲ್ದಾಣ ತಲುಪಿದ್ದ ಪಾರ್ಥಿವ ಶರೀರವನ್ನು ಪೊಲೀಸರು ಮತ್ತು ಅಧಿಕಾರಿಗಳು ಸ್ವೀಕರಿಸಿದರು. ಈ ವೇಳೆ ವೀರ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪಮಾಲೆಯನ್ನಿಟ್ಟು ವಿಮಾನ ನಿಲ್ದಾಣದ ಪೊಲೀಸ್ ಸಿಬ್ಬಂದಿ ನಮಿಸಿದರು. ಅಂಬುಲೆನ್ಸ್ ಮುಂದೆ ವೀರಯೋಧನ ಭಾವಚಿತ್ರದ ಬ್ಯಾನರ್ ಕಟ್ಟಿ ಗೌರವಿಸಿದರು. ಬಳಿಕ ವಿಮಾನ ನಿಲ್ದಾಣದಿಂದ ನೇರವಾಗಿ ಕೋಲಾರದ ಬಂಗಾರಪೇಟೆ ಕಡೆ ಅಂಬುಲೆನ್ಸ್ ಮೂಲಕ ಪೊಲೀಸರು ತೆಗೆದುಕೊಂಡು ಹೋದರು.
Advertisement
Advertisement
ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಶಾಂತ್ ಪಾರ್ಥಿವ ಶರೀರವನ್ನು ತಡರಾತ್ರಿ ಕೋಲಾರದ ಬಂಗಾರಪೇಟೆಗೆ ಕೊಂಡೊಯ್ಯಲಾಯಿತು. ಬಂಗಾರಪೇಟೆ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಮುಂಜಾನೆ 5 ಗಂಟೆಯಿಂದಲೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಬೆಳಗ್ಗೆ ಬಂಗಾರಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಪ್ರಶಾಂತ್ ಸ್ವಗ್ರಾಮ ಕಣ್ಣಿಂಬೆಲೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.