ಕೋಲಾರ: ಇಡೀ ವಿಶ್ವವೇ ಕೊರೊನಾ ವೈರಸ್‍ನಿಂದ ದೂರ ಇರಲು ಹರಸಾಹಸ ಪಡುತ್ತಿದೆ. ಹೀಗಾಗಿ ಮುಳಬಾಗಿಲು ತಾಲೂಕಿನ ಎಂ.ಗೊಲ್ಲಹಳ್ಳಿಯ ಜನರು ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿಕೊಂಡು ಮಾದರಿಯಾಗಿದ್ದಾರೆ.
ಎಂ.ಗೊಲ್ಲಹಳ್ಳಿಯ ಜನರು ಸ್ವಯಂ ದಿಗ್ಬಂಧನ ಮಾಡಿಕೊಳ್ಳುವ ಮೂಲಕ ಗ್ರಾಮಕ್ಕೆ ಕೊರೊನಾ ಕಾಲಿಡದಂತೆ ಕೊರೊನಾಗೆ ಎಚ್ಚರಿಕೆ ವಹಿಸಿದ್ದಾರೆ. ಎರಡು ತಿಂಗಳ ಕಾಲ ಗ್ರಾಮದಿಂದ ಯಾರೂ ಹೊರ ಹೋಗದಂತೆ, ಹೊರಗಿನಿಂದ ಗ್ರಾಮಕ್ಕೆ ಯಾರೂ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಐದು ರಸ್ತೆಗಳಲ್ಲಿ ಗ್ರಾಮಸ್ಥರೇ ಚೆಕ್ ಪೋಸ್ಟ್ ಹಾಕಿದ್ದಾರೆ. ಜೊತೆಗೆ ಗ್ರಾಮಸ್ಥರೇ ಚೆಕ್ ಪೋಸ್ಟ್‍ಗಳಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ನಮ್ಮೂರು ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಕೇವಲ ಕೂಗಳತೆ ದೂರದಲ್ಲಿದೆ. ಅಲ್ಲಿಂದಲೂ ಜನರು ಬರುತ್ತಾರೆ. ಹಾಗಾಗಿ ಕರ್ನಾಟಕ ಅಥವಾ ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಂದಲೂ ಗ್ರಾಮಸ್ಥರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಎಲ್ಲಾ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕು ಎನ್ನುವುದು ಸರಿಯಲ್ಲ. ಮೊದಲು ನಮ್ಮ ಗ್ರಾಮವನ್ನು ನಾವು ಕಾಪಾಡಿಕೊಳ್ಳಬೇಕು. ಅದಕ್ಕಾಗಿಯೇ ಗ್ರಾಮಕ್ಕೆ ದಿಗ್ಬಂಧನ ಹಾಕಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement
ಕೊರೊನಾ ವೈರಸ್‍ನಿಂದ ಗ್ರಾಮಸ್ಥರನ್ನು ಕಾಪಾಡಲು ಮುಖಂಡರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಮೊದಲಿಗೆ ಅವಶ್ಯಕತೆ ಇರುವ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳುವುದು, ನಂತರ ಬೇರೆ ಗ್ರಾಮದಲ್ಲಿರುವ ಕುಟುಂಬದ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಯೋಚಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹಾಕಿರುವ ಚೆಕ್ ಪೋಸ್ಟ್ ಗಳಲ್ಲಿ ಗ್ರಾಮದವರೇ ಕಾವಲು ಕಾಯುವುದು, ಗ್ರಾಮದಲ್ಲಿ ಉತ್ಪಾದನೆಯಾದ ಹಾಲು, ತರಕಾರಿಯನ್ನು ಗ್ರಾಮದಲ್ಲೇ ಹಂಚಿಕೆ ಮಾಡಿಕೊಳ್ಳುವಂತೆ ಗ್ರಾಮದ ಮುಖಂಡರು ತಿಳಿಸಿದ್ದಾರೆ.
Advertisement
ಎಲ್ಲರೂ ಸೇರಿ ಗ್ರಾಮವನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಗ್ರಾಮದಲ್ಲಿ ಸಂಗ್ರಹವಾಗುವ ಹಸುವಿನ ಗಂಜಲವನ್ನು ಗ್ರಾಮದಲ್ಲಿ ಸಿಂಪಡಿಸುವುದು ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ.