ಬೆಂಗಳೂರು: ಬುಧವಾರ ಯುಗಾದಿ ಪರ್ವದಿನ, ಹಿಂದೂಗಳ ಹೊಸ ವರ್ಷದ ಮೊದಲ ದಿನವನ್ನೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ (Congress) ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.
ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಫೈನಲ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿದ್ಯಂತೆ. ಸಿಂಗಲ್ ಹೆಸರು ಶಿಫಾರಸು ಆಗಿದ್ದ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಆದರೆ ಇದ್ರಲ್ಲಿ ವರುಣಾ ಹಾಗೂ ಕೋಲಾರ ಕ್ಷೇತ್ರ (Varuna And Kolar Constituency) ಇರುತ್ತೋ ಇಲ್ವೋ ಎಂಬ ಕುತೂಹಲ ಎಲ್ಲರಲ್ಲಿದೆ. ಜೊತೆಗೆ ನಾಳೆ ಬಿಡುಗಡೆ ಆಗಬಹುದು. ಆಗದೆಯೂ ಇರಬಹುದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಎಲೆಕ್ಷನ್ ಸಮೀಪಿಸ್ತಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಎಲ್ಲಿಂದ ಅನ್ನೋದು ಮಾತ್ರ ಫೈನಲ್ ಆಗಿಲ್ಲ. ಈ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಕೋಲಾರದಿಂದ ಸ್ಪರ್ಧಿಸದಂತೆ ಹೈಕಮಾಂಡ್ ಸೂಚಿಸಿದೆ ಅಂತ ಸುದ್ದಿ ಹರಿದಾಡಿದ ಬೆನ್ನಲ್ಲೇ ಬೆಂಗಳೂರಿಗೆ, ಕೋಲಾರ ಕಾರ್ಯಕರ್ತರು ಆಗಮಿಸಿ ನಮಗೆ ನೀವೇ ಬೇಕು ಎನ್ನುತ್ತಾ ಹೈಡ್ರಾಮಾ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕೋಲಾರ ಸ್ಪರ್ಧಾ ಕಣದಿಂದ ಹಿಂದೆ ಸರಿಯದಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ. ಇದನ್ನೂ ಓದಿ: ನಾನು ಕ್ಷೇತ್ರ ಹುಡುಕಾಡ್ತಿಲ್ಲ, ನನ್ನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ – ಸಿದ್ದರಾಮಯ್ಯ
ಒಂದು ವೇಳೆ ಕೋಲಾರ ಸ್ಪರ್ಧೆ ಮಾಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿಯೂ ಕೆಲವರು ಬೆದರಿಕೆ ಹಾಕಿದ್ದಾರೆ. ಕೋಲಾರ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಿಲು ಸಿದ್ದರಾಮಯ್ಯ ಹರಸಾಹಸ ಪಟ್ಟರು. ರಾಜ್ಯಾದ್ಯಂತ ಸುತ್ತಾಡಲು ಹೈಕಮಾಂಡ್ ಸೂಚಿಸಿದೆ. ನಾಳೆ ಪತ್ನಿ ಹಾಗೂ ಮಗನೊಂದಿಗೆ ಚರ್ಚಿಸಿ ನಾಳೆ ಸ್ಪರ್ಧಾ ಕಣದ ಕುರಿತಾಗಿ ಅಂತಿಮ ನಿರ್ಧಾರ ಪ್ರಕಟ ಮಾಡೋದಾಗಿ ಸಿದ್ದರಾಮಯ್ಯ ತಿಳಿಸಿದ್ರು. ಸೋಲು, ಗೆಲುವು ಯಾರ ಕೈಯಲ್ಲೂ ಇಲ್ಲ. ಅದು ಮತದಾರರ ಕೈಯಲ್ಲಿದೆ. ನಾನು ಯಾರಿಗೂ ಅಂಜಲ್ಲ ಅಂತಲೂ ಸ್ಪಷ್ಪಪಡಿಸಿದ್ರು.
ಸಿದ್ದರಾಮಯ್ಯ ಎಲ್ಲಿಂದ ಬೇಕಿದ್ರೂ ಸ್ಪರ್ಧೆ ಮಾಡಬಹುದು. ಅದನ್ನು ವಿವೇಚನೆಗೆ ಬಿಡುತ್ತೇವೆ. ಕೋಲಾರದಿಂದ ಸ್ಪರ್ಧೆ ಮಾಡ್ಬೇಡಿ ಎಂದು ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.