ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿಧಾನಗತಿ ಬೌಲಿಂಗ್ ಮಾಡಿದಕ್ಕೆ ನಾಯಕ ವಿರಾಟ್ ಕೊಹ್ಲಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.
ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ಣಗೊಳಿಸದ ಕಾರಣ ಪಂದ್ಯದ ರೆಫರಿ ನಾಯಕ ಕೊಹ್ಲಿಗೆ 12 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ. ಈ ಮೂಲಕ 2018ರ ಐಪಿಎಲ್ ಆವೃತ್ತಿಯಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಮೊದಲ ತಂಡ ಎಂಬ ಕುಖ್ಯಾತಿಯನ್ನು ಆರ್‌ಸಿಬಿ ಪಡೆದುಕೊಂಡಿದೆ.
ಚೆನ್ನೈ ಹಾಗೂ ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಕಾರಣ ಕ್ರೀಡಾಂಗಣದ ತುಂಬಾ ಅಭಿಮಾನಿಗಳು ತುಂಬಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ತಂಡ 205 ರನ್‍ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಪರ ರಾಯುಡು ಹಾಗೂ ನಾಯಕ ಎಂಎಸ್ ಧೋನಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿ ಕೇವಲ 30 ಎಸೆತಗಳಲ್ಲಿ ಅಜೇಯ 70 ರನ್ (3ಬೌಂಡರಿ, 8 ಸಿಕ್ಸರ್) ಸಿಡಿಸಿದರೆ, ಇದಕ್ಕೂ ಮುನ್ನ ಅಂಬಟಿ ರಾಯುಡು 82 (53 ಎಸೆತ 3 ಬೌಂಡರಿ, 8 ಸಿಕ್ಸರ್) ರನ್ ಸಿಡಿಸಿದ್ದರು.
ಚೆನ್ನೈ ತಂಡದ ಬ್ಯಾಟಿಂಗ್ ಕಟ್ಟಿ ಹಾಕಲು ಯತ್ನಿಸಿದ ಕೊಹ್ಲಿ ಹಲವು ಬಾರಿ ಬೌಲಿಂಗ್ ನಲ್ಲಿ ಬದಲಾವಣೆಯನ್ನು ತಂದರು. ಅದರು ಆರ್‌ಸಿಬಿ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿದ ಚೆನ್ನೈ ಆಟಗಾರರು ಗೆಲುವಿನ ಸಿಹಿ ಪಡೆದರು.