ಮಡಿಕೇರಿ: ಕೊಡಗು ಪ್ರವಾಸಿ ತಾಣಗಳ ತವರೂರು ಅಷ್ಟೇ ಅಲ್ಲ. ಕೊಡವರ ಆಚಾರ ವಿಚಾರಗಳು ಕೂಡ ಅತೀ ವಿಶಿಷ್ಟ. ಆದರೆ ಇತ್ತೀಚೆಗೆ ಕೊಡವರ ವಿವಾಹ ಸಮಾರಂಭಗಳಲ್ಲಿ ಕೆಲವರು ಕೇಕ್ ಕತ್ತರಿಸುವುದು, ಶಾಂಪೇನ್ ಹಾರಿಸೋದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ಕೊಡವ ಸಂಸ್ಕೃತಿಗೆ ಧಕ್ಕೆ ತರುವಂತಹ ಆಚರಣೆಗಳು ಎಂದು ಕೊಡವ ಸಮಾಜದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಾರಿಸೋದನ್ನು ನಿಷೇಧಿಸಿವೆ. ಒಂದು ವೇಳೆ ವಿವಾಹದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಾರಿಸೋದನ್ನು ಮಾಡಿದರೆ, ಅಂತಹ ಮದುವೆಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿವೆ. ಇದನ್ನೂ ಓದಿ: ಬಿಟ್‍ಕಾಯಿನ್ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆಯಾಗಲಿ: ಡಾ.ಜಿ ಪರಮೇಶ್ವರ್
ಕೊಡವರು ಪ್ರಕೃತಿ ಆರಾಧಕರು. ಅವರ ಸಂಸ್ಕೃತಿಯೇ ವಿಶಿಷ್ಟ. ವಿವಾಹಕ್ಕೆ ನಿಶ್ಚಿತಾರ್ಥ ಆದ ಬಳಿಕ ಯುವಕ ಗಡ್ಡ ಬೋಳಿಸುವಂತಿಲ್ಲ. ಮದುವೆ ದಿನ ಗಡ್ಡ ತೆಗೆದು ವಿವಾಹಕ್ಕೆ ಸಿದ್ಧವಾಗಬೇಕು. ಮದುವೆಯ ದಿನ ಗಡ್ಡವನ್ನು ಬಿಡುವಂತಿಲ್ಲ. ವಧು-ವರರಿಗೆ ಮಹಿಳೆಯರು ಬಿಚ್ಚು ತಲೆಯಲ್ಲಿ ಆಶೀರ್ವದಿಸುವಂತಿಲ್ಲ. ಬಿಚ್ಚು ತಲೆಯಲ್ಲಿ ಇರುವುದು ಅಶುಭದ ಸಂಕೇತ. ಅದರಲ್ಲೂ ಶೋಕದ ಸಂದರ್ಭದಲ್ಲಿ ಮಹಿಳೆಯರು ಬಿಚ್ಚುತಲೆಯಲ್ಲಿ ಇರುತ್ತಾರೆ ಎನ್ನುತ್ತಾರೆ ಕೊಡವ ಮುಖಂಡ ಎಂ.ಬಿ.ದೇವಯ್ಯ.
ಇತ್ತೀಚೆಗೆ ಆಧುನಿಕ ಶೈಲಿಗೆ ಮಾರುಹೋಗಿರುವ ಕೆಲವರು ಉದ್ದದ ಗಡ್ಡವನ್ನು ಬಿಟ್ಟುಕೊಂಡೇ ವಿವಾಹವಾಗುತ್ತಿದ್ದಾರೆ. ಇನ್ನು ಮಹಿಳೆಯರು ಕೂಡ ಬಿಚ್ಚು ತಲೆಯಲ್ಲಿ ವಧು-ವರರಿಗೆ ಆಶೀರ್ವದಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್, ಪೆಟ್ರೋಲ್ ಇಲ್ಲ
ಕೇಕ್ ಕತ್ತರಿಸುವುದು, ಶಾಂಪೇನ್ ಹಾರಿಸುವುದು ಕೊಡವ ಸಂಸ್ಕೃತಿಯೇ ಅಲ್ಲ. ಅದು ಬ್ರಿಟಿಷರ ಅಥವಾ ಕ್ರೈಸ್ತರ ಸಂಸ್ಕೃತಿ. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ 8 ದಶಕಗಳಾದರೂ, ಅವರ ಸಂಸ್ಕೃತಿಯನ್ನು ಮತ್ತೆ ನಾವು ಅಳವಡಿಸಿಕೊಂಡರೆ ನಮ್ಮ ಸಂಸ್ಕೃತಿ ಮೂಲೆ ಗುಂಪಾಗುತ್ತದೆ. ಹೀಗಾಗಿ ಶ್ರೇಷ್ಠವಾದ ನಮ್ಮ ಸಂಸ್ಕೃತಿಯನ್ನೇ ಉಳಿಸಿ ಬೆಳೆಸಬೇಕಾದ ನಾವು ಬೇರೆಯವರ ಸಂಸ್ಕೃತಿಯನ್ನು ಆಚರಿಸಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬಾರದು ಎಂಬುದು ಕೊಡವ ಸಮಾಜದ ಮುಖಂಡರ ಅಭಿಪ್ರಾಯ.