– ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿರಾಯ
– ನಿದ್ದೆ ಇಲ್ಲದೆ ಟಾರ್ಚ್ ಹಿಡಿದು ಹಸುಗಳನ್ನು ಕಾಯುವ ಕೆಲಸ
ಮಡಿಕೇರಿ: ವರ್ಷದ ಎಲ್ಲ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನರು ಇದೀಗ ಹುಲಿಯ ಹಾವಳಿಯಿಂದ ಭಯಗೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಸುತ್ತ ಕಳೆದ ಎರಡೂವರೆ ತಿಂಗಳಲ್ಲಿ ಹುಲಿ ದಾಳಿಗೆ ಸುಮಾರು 29 ಜಾನುವಾರುಗಳು ಬಲಿಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟು ಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ.
Advertisement
ಕಳೆದ ಒಂದೇ ತಿಂಗಳಲ್ಲಿ 15ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು, ಹುದಿಕೇರಿ, ಬೆಳ್ಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಟಾರ್ಗೆಟ್ ಮಾಡಿ ಹುಲಿ ದಾಳಿ ನಡೆಸುತ್ತಿದೆ. ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಬೋನ್ ಇಟ್ಟಿದೆ. ಆದರೆ ಹುಲಿ ಬೋನ್ ಕಡೆ ಸುಳಿಯುತ್ತಲೇ ಇಲ್ಲ.
Advertisement
ಜನರು ಹುಲಿಯ ಆತಂಕದಿಂದ ರಾತ್ರಿ ಇಡೀ ಟಾರ್ಚ್ ಹಾಕಿ ಜಾರುವಾರುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಜಾರುವಾರುಗಳು ಸಾವನ್ನಪ್ಪಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೇವಲ 2-3 ಸಾವಿರ ರೂ. ಪರಿಹಾರ ನೀಡುತ್ತಾರೆ. ಆದರೆ ಒಂದು ಜರ್ಸಿ ತಳಿಯ ಹಸುಗೆ ಕನಿಷ್ಠ 40 ರಿಂದ 50 ಸಾವಿರ ರೂ ಬೆಲೆ ಇದೆ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಬಡ ರೈತರು ಹುಲಿ ದಾಳಿಯಿಂದ ಕಂಗಾಲಾಗಿದ್ದಾರೆ.
Advertisement
Advertisement
ಶನಿವಾರ ಸಂಜೆ ಬೆಳ್ಳೂರು ಗ್ರಾಮದ ಗೋಪಾಲ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಈ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುದಿಕೇರಿ ಹೋಬಳಿ ಸಂಚಾಲಕ ಸೂರಜ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಸ್ಥಳೀಯ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ದಿನ ನಿತ್ಯ ಹುಲಿ ಹಾವಳಿಯಿಂದ ಗ್ರಾಮದಲ್ಲಿ ಜೀವನ ಮಾಡುವುದೇ ಕಷ್ಟವಾಗಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.