ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಯುವಕನೊಬ್ಬ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಜೋಡುಪಾಲದಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಜೋಡುಪಾಲ ನಿವಾಸಿ 55 ವರ್ಷದ ಹೊನ್ನಮ್ಮ ಮೃತ ಮಹಿಳೆಯಾಗಿದ್ದು, ಅದೇ ಗ್ರಾಮದ 45 ವರ್ಷದ ಆನಂದ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಆರೋಪಿ ಆನಂದನನ್ನು ಬಂಧಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಆನಂದ ಹಾಗೂ ಮೃತ ಹೊನ್ನಮ್ಮ ಕುಟುಂಬ ನಿವಾಸ ಬಳಿ ದಾರಿ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿದೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರವಾಗಿ ಜಗಳ ಆರಂಭವಾಗಿದ್ದು, ಇದರಿಂದ ರೊಚ್ಚಿಗೆದ್ದ ಆರೋಪಿ ಆನಂದ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ರಾತ್ರಿ ಸುಮಾರು 9.30ರ ವೇಳೆಗೆ ಘಟನೆ ನಡೆದಿದ್ದು, ಸ್ಥಳದಲ್ಲೇ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.