ಮಡಿಕೇರಿ: ಕೊಡಗು ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಚಪಾತಿ, ಉಪ್ಪಿಟ್ಟು ಸೇರಿದಂತೆ ವಿವಿಧ ಆಹಾರಕ್ಕಾಗಿ ಖರೀದಿಸಿದ್ದ 350 ಕ್ವಿಂಟಾಲ್‍ಗೂ ಹೆಚ್ಚು ಗೋಧಿ ಗೋದಾಮಿನಲ್ಲಿ ವೇಸ್ಟ್ ಆಗಿ ಬಿದ್ದಿದೆ.
ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರ ಹಾಸ್ಟೆಲ್‍ಗಳನ್ನು ತೆರೆದಿದೆ. ಈ ಮೂಲಕ ಅವರ ಶಿಕ್ಷಣದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುತ್ತಿದ್ದು, ಅದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತದೆ. ಕೊಡಗಿನ ಎಲ್ಲಾ ಹಾಸ್ಟೆಲ್‍ಗಳಿಗಾಗಿ 400 ಕ್ವಿಂಟಾಲ್ ಗೋಧಿಯನ್ನು ಖರೀದಿಸಿ ವಿರಾಜಪೇಟೆಯ ಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಗೋಧಿಯನ್ನು ಸಂಗ್ರಹಿಸಿ ಮೂರು ತಿಂಗಳಾದರೂ ಇದುವರೆಗೂ ಹಾಸ್ಟೆಲ್‍ಗಳಿಗೆ ಅಧಿಕಾರಿಗಳು ಅಥವಾ ವಾರ್ಡನ್‍ಗಳು ಎತ್ತುವಳಿ ಮಾಡಿಲ್ಲ.
Advertisement
Advertisement
ಮೂರು ತಿಂಗಳಲ್ಲಿ ಕೇವಲ 35 ಕ್ವಿಂಟಾಲ್‍ನಷ್ಟು ಗೋಧಿಯನ್ನು ಮಾತ್ರ ಬಳಕೆ ಮಾಡಲಾಗಿದೆ. ಉಳಿದ 365 ಕ್ವಿಂಟಾಲ್ ಗೋಧಿ ಗೋದಾಮಿನಲ್ಲೇ ಕೊಳೆಯುತ್ತಿದೆ. ಒಮ್ಮೆ ಗೋಧಿಯನ್ನು ಸಂಗ್ರಹಿಸಿದರೆ ಅದನ್ನು ಹೆಚ್ಚೆಂದರೆ 6 ತಿಂಗಳವರೆಗೆ ಮಾತ್ರವೇ ಸಂಗ್ರಹಿಸಿಡಬಹುದು. ನಂತರ ಅದು ಹಾಳಾಗಿ ಹುಳುಹಿಡಿಯುತ್ತದೆ. ಆದರೆ ಈಗಾಗಲೇ ಸಂಗ್ರಹಿಸಿ ಮೂರು ತಿಂಗಳು ಪೂರೈಸಿದರೂ ಗೋದಾಮಿನಲ್ಲಿರುವ ಗೋಧಿ ಇನ್ನೂ ಒಂದು ವರ್ಷಕ್ಕೆ ಆಗುವಷ್ಟು ಸಂಗ್ರಹವಾಗಿದೆ.
Advertisement
ಒಂದು ಕೆ.ಜಿ. ಗೋಧಿಗೆ 26 ರೂಪಾಯಿಯಂತೆ ಲೆಕ್ಕ ಹಾಕಿದರೂ, 350 ಕ್ವಿಂಟಾಲ್ ಗೋಧಿಗೆ ಸರ್ಕಾರದ ಸುಮಾರು 10 ಲಕ್ಷ ರೂ. ನಷ್ಟವಾಗಲಿದೆ. ಅದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಪೌಷ್ಠಿಕಾಂಶಯುಕ್ತ ಆಹಾರದಿಂದ ವಂಚಿತರಾಗಲಿದ್ದಾರೆ. ಕೊಡಗಿನ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೂ ಶಿಕ್ಷಣದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕಾಗಿದ್ದ ಅಧಿಕಾರಿಗಳು, ನೂರಾರು ಕ್ವಿಂಟಾಲ್ ಗೋಧಿಯನ್ನು ಹಾಳು ಮಾಡುತ್ತಿರುವುದು ಮಾತ್ರ ವಿಪರ್ಯಾಸ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.