ಹಾಸನ: ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ ಸ್ಥಾನಕ್ಕೆ ಮನವಿ ಮಾಡಿದ ಹಿನ್ನೆಲೆ, ಅವರು ನಮ್ಮ ಪಕ್ಷದಲ್ಲೇ ಇದ್ದವರು. ಹೀಗಾಗಿ ಬಾಲಚಂದ್ರ ಅವರಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಚುನಾವಣೆ ದಿನಾಂಕದಂದು ನನ್ನ ಅರ್ಜಿ ಮಾತ್ರ ಇತ್ತು. ಬಿಜೆಪಿಯವರಿಗೆ ಟಾರ್ಗೆಟ್ ಇರೋದು ದೇವೇಗೌಡರ ಕುಟುಂಬ. ಹೀಗಾಗಿ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕೆಎಂಎಫ್ ಚುನಾವಣೆಯ ಕಡತವನ್ನು ಕೈಗೆತ್ತಿಕೊಂಡು, ಚುನಾವಣೆಯನ್ನು ಮುಂದೂಡಿದರು. ಕುರಿಯನ್ ಅವರ ಮೇಲೆಯೇ ವಿಚಾರಣೆ ನಡೆಸಿದ್ದರು. ಇನ್ನು ನಾವು ಯಾವ ಲೆಕ್ಕ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ರಾಜಕಾರಣದಲ್ಲಿ ಯಾವುದಕ್ಕೂ ಅಂಜುವುದಿಲ್ಲ. ಅವರೇ ಅಧಿಕಾರ ಮಾಡಲಿ ಪಾಪ ಎಂದು ನಾನು ಬಿಟ್ಟುಕೊಟ್ಟಿದ್ದೇನೆ. ನಮ್ಮ ಕುಟುಂಬದಿಂದ ಯಾಕೆ ಅವರಿಗೆ ತೊಂದರೆ. ಹೀಗಾಗಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇನೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನಾನು ಡೈರಿಯಿಂದ ಒಂದು ಕಾಫಿಯನ್ನೂü ಕುಡಿದಿಲ್ಲ. ಡೈರಿ ಬೆಳವಣಿಗೆಗೆ ಕುರಿಯನ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರ ಎಂದು ಇದೇ ವೇಳೆ ತಿಳಿಸಿದರು.
ದೇವೇಗೌಡರ ಕುಟುಂಬದಿಂದ ಈ ರಾಜ್ಯದ ಹಾಲು ಉತ್ಪಾದಕರಿಗೆ ನೋವಾಗಬಾರದು, ಚೆನ್ನಾಗಿರಬೇಕು ಎನ್ನುವುದು ನಮ್ಮ ಉದ್ದೇಶ. ದೇಶದಲ್ಲಿ ಹೈನುಗಾರಿಕೆ ಬೆಳವಣಿಗೆಗೆ ಕುರಿಯನ್ ಕಾರಣ. ಅವರ ವಿರುದ್ಧವೇ ತನಿಖೆ ಮಾಡಿದ್ದರು. ಡೈರಿ ಬೆಳವಣಿಗೆ ನಮ್ಮ ಕೊಡುಗೆ ಅಪಾರ ಎಂದು ವಿವರಿಸಿದರು.
ದಕ್ಷಿಣ ಭಾರತದಲ್ಲಿ ಐಸ್ ಕ್ರೀಂ ಪ್ಲಾಂಟ್ ಬಂದಿದ್ದು ದೇವೇಗೌಡರ ಕಾಲದಲ್ಲಿ. ಚನ್ನರಾಯಪಟ್ಟಣದ ಚಿಲ್ಲಿಂಗ್ ಸೆಂಟರ್‍ನ್ನು ಹಾಸನಕ್ಕೆ ಸೇರಿಸಬಹುದಿತ್ತು, ಇಲ್ಲವೆ ಹೊಳೆನರಸೀಪುರಕ್ಕೆ ಹಾಕಿಕೊಳ್ಳಬಹುದಿತ್ತು. ಆದರೆ ನಾನು ಆ ರೀತಿ ಮಾಡಿಲ್ಲ. ದೇವೇಗೌಡರ ಕುಟುಂಬದಿಂದ ಅಧ್ಯಕ್ಷರಾಗಿ ಏನೋ ಆಗಬಹುದು ಎಂದು ಕೊಳ್ಳಬೇಡಿ, ಬಾಲಚಂದ್ರ ಅವರೂ ಅಧ್ಯಕ್ಷರಾಗಿ ಆಡಳಿತ ನಡೆಸಲಿ ಎಂದು ತಿಳಿಸಿದರು.
ಚುನಾವಣೆ ಮುಂದೂಡಿದ ದಿನದಂದು ಕಚೇರಿ ರಾತ್ರಿಯವರೆಗೂ ನಡೆಯಿತು. ಹಾಸನದ ಯೂನಿಯನ್‍ನಿಂದ ಸಾಕಷ್ಟು ಹಣ ಕೆಎಂಎಫ್‍ಗೆ ತೊಡಗಿಸಿದ್ದೇವೆ. ಬಾಲಚಂದ್ರ ಅವರಿಗೆ ನನ್ನ ಬೆಂಬಲವಿದೆ. ನಮ್ಮನ್ನು ರಾಜಕೀಯವಾಗಿ ಯಾರು ಮುಗಿಸಲು ಸಾಧ್ಯವಿಲ್ಲ. ಇಂತಹದ್ದನ್ನೆಲ್ಲ ನೋಡಿ ಬಿಟ್ಟಿದ್ದೇವೆ. ಏನು ಬೇಕಾದರೂ ಮಾಡಲಿ ಎಂದು ದ್ವೇಷದ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದರು. ಇದನ್ನೆಲ್ಲ ಎದುರಿಸಿ ಅಸಹಕಾರದಲ್ಲಿ ಉಳಿದಿದ್ದೀವೆ. ಹಿಂದೆ ದೇವೇಗೌಡರ ಕಥೆ ಮುಗಿದೇ ಹೋಯಿತು ಅಂದುಕೊಂಡಿದ್ದರು. ನಂತರ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಲಿಲ್ಲವೇ? ನಮ್ಮ ಮೇಲೆ ಸಿಓಡಿ, ಲೋಕಾಯುಕ್ತ ಎಲ್ಲ ತನಿಖೆ ಮಾಡಿಸಿದರು ಏನೂ ಮಾಡಲು ಸಾಧ್ಯವಾಗಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ. ಏನು ಮಾಡಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.
ಸಿದ್ದರಾಮಯ್ಯನವರಷ್ಟು ಅನುಭವ ಇಲ್ಲ:
ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನ ವೇಶ್ಯೆಯರಿಗೆ ಹೋಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದಿಲ್ಲ. ಅವರಷ್ಟು ಅನುಭವ, ಬುದ್ಧಿ ನಮಗಿಲ್ಲ. ಸರ್ಕಾರ ಬಿದ್ದು ಹೋಗಿದೆ. ಈಗ ಯಾಕೆ ಪೋಸ್ಟ್ ಮಾರ್ಟಮ್. ಅಲ್ಲದೆ, ಸಿದ್ದರಾಮಯ್ಯನವರು ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೂ ಮುನ್ನ ನಾನು ಹೋಗಿದ್ದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.