ಬೆಂಗಳೂರು: ನಗರದಲ್ಲಿ ಮತ್ತೊಂದು ಮನೆ ಕುಸಿತವಾಗಿದ್ದು, ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರಸ್ ನಲ್ಲಿ ಘಟನೆ ನಡೆದಿದೆ.
ಹಳೆ ಮನೆಯಾಗಿದ್ದರಿಂದ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿವಾಸಿ ಪೂರ್ಣಿಮ ಅವರ ತಲೆಗೆ ಹಾಗೂ ಉಳಿದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊನೆ ಕ್ಷಣದಲ್ಲಿ ಪೂರ್ಣಿಮ ಕುಟುಂಬ ಕಟ್ಟಡದಲ್ಲಿ ಸಿಲುಕಿಕೊಂಡಿತ್ತು. ಹೊರಗಡೆ ಬರುವ ವೇಳೆ ಪೂರ್ಣಿಮ ಪತಿ ನವೀನ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.
Advertisement
Advertisement
ಕುಸಿಯುವ ಸೂಚನೆ ಸಿಕ್ಕ ಕೂಡಲೇ 9 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಭಾರೀ ದುರಂತ ತಪ್ಪಿದಂತಾಗಿದೆ. ಕಟ್ಟಡಗಳ ಮೆಟ್ಟಿಲುಗಳ ಭಾಗ ಕುಸಿದಿದೆ. ಈ ಕಟ್ಟಡವನ್ನು 1965 ರಲ್ಲಿ ನಿರ್ಮಿಸಲಾಗಿದ್ದು, ಒಟ್ಟು ಹದಿನೆಂಟು ಕುಟುಂಬಗಳಿದ್ದವು. ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ನಿವಾಸಿಗಳು ಹೊರಗೆ ಓಡಿದ್ದಾರೆ. ಇದನ್ನೂ ಓದಿ: ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ
Advertisement
Advertisement
ಮನೆಯಲ್ಲಿನ ಎಲ್ಲ ವಸ್ತುಗಳನ್ನು ಹಾಗೇ ಬಿಟ್ಟು ನಿವಾಸಿಗಳು ಹೊರಗೆ ಓಡಿದ್ದಾರೆ. ಕಟ್ಟಡ ಸುಮಾರು ನಾಲ್ಕು ಅಡಿ ಕುಸಿದಿದೆ. ಇದೇ ವೇಳೆ ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆಯ ಕಾಂಪೌಂಡ್ ನಲ್ಲಿ ನಾಯಿ ಸಿಲುಕಿತ್ತು. ಅಗ್ನಿಶಾಮಕ ಸಿಬ್ಬಂದಿ ಸಾಕು ನಾಯಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಕಟ್ಟಡ ಕುಸಿಯುವ ಸೂಚನೆ ಅರಿತು, ಸ್ಥಳಿಯರು ಕೆಎಂಎಫ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ತಕ್ಷಣ ಎಲ್ಲರನ್ನೂ ಹೊರ ಕಳುಹಿಸಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಿಬಿಎಂಪಿ ವತಿಯಿಂದ ವಾಸಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ. ಆದರೂ ಕೆಎಂಎಫ್ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಏಳು ಬ್ಲಾಕ್ ನಲ್ಲಿ 150 ಕ್ಕೂ ಹೆಚ್ಚು ಮನೆಗಳು ಇವೆ. ಎಲ್ಲವೂ ಕುಸಿಯುವ ಪರಿಸ್ಥಿತಿಯಲ್ಲಿವೆ. ಕೇಳಲು ಹೋದರೆ ಟಾರ್ಗೆಟ್ ಮಾಡುತ್ತಾರೆಂದು ಮಾಧ್ಯಮಗಳ ಜೊತೆ ಮಾತನಾಡಲು ಸಹ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.
ಬೆಳಗ್ಗೆ 7.30ಕ್ಕೆ ಕಟ್ಟಡ ಕುಸಿಯೋಕೆ ಶುರುವಾಯಿತು. ತಕ್ಷಣ ಎಲ್ಲರನ್ನೂ ಎಚ್ಚರಗೊಳಿಸಿದೆವು. ಕೆಳಗೆ ಓಡಿ ಬಂದರು. ಈ ವೇಳೆ ನಾಲ್ವರಿಗೆ ಗಾಯವಾಗಿದೆ. ಮುಂಜಾಗೃತೆ ವಹಿಸಿದೇ ಇದ್ದಿದ್ದರೆ ದೊಡ್ಡ ಮಟ್ಟದ ಅನಾಹುತ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಉಮೇಶ್ ಹೇಳಿದ್ದಾರೆ.