ಹಾಸನ: ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಂತಿಮವಾದಂತಹ ತೀರ್ಮಾನವನ್ನು ಜನತೆ, ಜನಾರ್ದನ ಕೊಡ್ತಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಹೇಳಿದ್ದಾರೆ.
ಎಚ್.ಡಿ ರೇವಣ್ಣ (HD Revanna) ಹಾಗೂ ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ವಿಚಾರ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ಮತ್ತು ರೇವಣ್ಣ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ನಾನು ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇವೆ. ಆದರೆ ಅದನ್ನು ಎಡಿಟಿಂಗ್ ಮಾಡಿ ತಮಗೆ ಉಪಯುಕ್ತವಾಗುವ ರೀತಿಯಲ್ಲಿ ತುಂಡು ತುಂಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ನನ್ನ ಕ್ಷೇತ್ರದ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ತಾವು ಮಾಡ್ತಾ ಇದ್ದೀರಿ. ಇದರಿಂದ ನೀವು ಯಶಸ್ಸು ಕಾಣುವುದಿಲ್ಲ. ಕ್ಷೇತ್ರದ ಜನತೆಗೆ ನಾನು ಯಾರು ಏನು ಅಂತಾ ಗೊತ್ತಿದೆ ಎಂದರು.
ಮಾಜಿ ಸಚಿವರಾಗಿ, ಜಿಲ್ಲೆಯ ನಾಯಕರಾಗಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಕೆಲಸವನ್ನು ನೀವು ಏನ್ ಮಾಡ್ತಿದ್ದೀರಿ ನಿಮಗೆ ಶೋಭೆ ತರುವಂತಹದ್ದಲ್ಲ. ನೀವು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀರಿ, ನಾನು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀನಿ. ನಿಮಗೆ ಸಾಮಾಜಿಕ ಜಾಲತಾಣದ ಬಗ್ಗೆ ಅಷ್ಟು ಅರಿವಿಲ್ಲ ಅಂತ ಭಾವಿಸಿದ್ದೇನೆ. ನನಗೂ ಅದರ ಬಗ್ಗೆ ಅರಿವಿಲ್ಲ. ಆದರೆ ಯಾರೋ ಮಧ್ಯದಲ್ಲಿ ರಾಜಕೀಯ ಕುತಂತ್ರವನ್ನು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್
ಅವರ ಮಾತಗಳನ್ನು ಕೇಳಿ ಇಂತಹ ಸಣ್ಣತನದ ರಾಜಕಾರಣ ನೀವು ಮಾಡಲಿಕ್ಕೆ ಪ್ರೇರಣೆಯನ್ನು ಕೊಡತಕ್ಕಂಹದ್ದು ನಿಮ್ಮ ರಾಜಕೀಯ ಜೀವನಕ್ಕೆ ಒಂದು ಕಳಂಕ ಆಗುತ್ತೆ. ರೇವಣ್ಣ ಅವರೇ ಇದಕ್ಕೆ ಅವಕಾಶವನ್ನು ಕೊಡಬೇಡಿ. ರಾಜಕೀಯದಲ್ಲಿ ಪಕ್ಷಾಂತರ ಅನ್ನುವುದು ಸರ್ವೆ ಸಾಮಾನ್ಯವಾದ ವಿಚಾರ. ನಿಮಗೂ ನಮಗೂ ಭಿನ್ನಾಭಿಪ್ರಾಯ ಬಂತು. ನಾವು ಇವತ್ತು ಬೇರೆ ಕಡೆ ಹೋಗ್ತಾ ಇದ್ದೀವಿ, ನೀವು ಬೇರೆ ಕಡೆ ಇದ್ದೀರಾ. ಯಾವುದೇ ರೀತಿಯಾದ ಭಿನ್ನಾಭಿಪ್ರಾಯ ನಮ್ಮಲ್ಲಿ ನಿಮ್ಮಲ್ಲಿ ಇಲ್ಲ. ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದು ನಾವು ಬೇರೆ ಆಗಿದ್ದೇವೆ. ಅದಕ್ಕೆ ನೀವು ಈ ರೀತಿ ಸಣ್ಣತನಕ್ಕೆ ಇಳಿದು ಇಂತಹ ಪ್ರವೃತ್ತಿಯನ್ನು ರೂಢಿಮಾಡಿಕೊಳ್ಳಬಾರದು ಅದು ಒಳ್ಳೆಯದಲ್ಲ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.