ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಷಿತ್ ರಾಣಾಗೆ (Harshit Rana) ಭಾರೀ ದಂಡ ವಿಧಿಸಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ನ ಆಟಗಾರರಾದ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ಹೆನ್ರಿಕ್ ಕ್ಲಾಸೆನ್ (Heinrich Klaasen) ಅವರು ಮೈದಾನ ತೊರೆಯುವಾಗ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಸನ್ನೆ ಮಾಡುವ ಮೂಲಕ ದಂಡಕ್ಕೆ ಗುರಿಯಾಗಿದ್ದಾರೆ. ಇದನ್ನೂ ಓದಿ: IPL 2024: 21 ರನ್ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್ ಕೊಹ್ಲಿ!
ಕೆಕೆಆರ್ ಹೀರೋ ವಿಲನ್ ಆಯ್ತು ಕೈಸನ್ನೆ:
ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಯುವ ಆಟಗಾರ ಹರ್ಷಿತ್ ರಾಣಾ ತಮ್ಮ ಅಂತಿಮ ಓವರ್ನಲ್ಲಿ ನೀಡಿದ ಪ್ರದರ್ಶನದಿಂದ ಕೆಕೆಆರ್ ತಂಡದ ಪಾಲಿನ ಹೀರೋ ಆಗಿ ಅಭಿಮಾನಿಗಳ ಮನ ಗೆದ್ದಿದ್ದರು. ಆದ್ರೆ ಪಂದ್ಯದ ಮಧ್ಯೆ ಅವರ ನಡವಳಿಕೆ ಹಲವರ ಅಸಮಾಧಾನಕ್ಕೂ ಕಾರಣವಾಯಿತು. ಮೈದಾನದಲ್ಲಿ ಅಶಿಸ್ತು ವರ್ತನೆ ತೋರಿಸಿದ ಕಾರಣ ಹರ್ಷಿತ್ ರಾಣಾಗೆ ಪಂದ್ಯದ ಒಟ್ಟು ಶುಲ್ಕದ ಶೇ.60 ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಐಪಿಎಲ್ ಸಮಿತಿ ಸೂಚಿಸಿದೆ.
ಹರ್ಷಿತ್ ರಾಣಾ ತಮ್ಮ ಕೈಸನ್ನೆ ಮೂಲಕ ಆಟಗಾರರನ್ನು ವ್ಯಂಗ್ಯಮಾಡಿರುವುದು ಕಂಡುಬಂದಿತು. ಇದು ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.4ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಐಪಿಎಲ್ ಸಮಿತಿ ತಿಳಿಸಿದೆ. ಇದನ್ನೂ ಓದಿ: 20 ಬಾಲ್ಗೆ ರಸೆಲ್ ಫಿಫ್ಟಿ – ಹೈದರಾಬಾದ್ ವಿರುದ್ಧ ಕೆಕೆಆರ್ಗೆ 4 ರನ್ಗಳ ರೋಚಕ ಜಯ
ಕೊನೇ ಕ್ಷಣದ ರೋಚಕತೆ ಹೇಗಿತ್ತು?
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 208 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಹೈದರಾಬಾದ್ ತಂಡದ ಗೆಲುವಿಗೆ ಕೊನೇ ಓವರ್ನಲ್ಲಿ 13 ರನ್ಗಳ ಅಗತ್ಯವಿತ್ತು. ಹರ್ಷಿತ್ ರಾಣಾ ಬೌಲಿಂಗ್ನಲ್ಲಿದ್ದರು. ಸ್ಟ್ರೈಕ್ನಲ್ಲಿದ್ದ ಹೆನ್ರಿಚ್ ಕ್ಲಾಸೆನ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ, 2ನೇ ಎಸೆತದಲ್ಲಿ 1 ರನ್ ಕದ್ದರು. 3ನೇ ಎಸೆತದಲ್ಲಿ ಸಿಕ್ಸರ್ ಪ್ರಯತ್ನಿಸಿದ ಶಹಬಾಜ್ ಅಹಮದ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ ಸ್ಟ್ರೈಕ್ಗೆ ಬಂದ ಮಾರ್ಕೋ ಜಾನ್ಸೆನ್ 1 ರನ್ ಗಳಿಸಿ, ಕ್ಲಾಸೆನ್ಗೆ ಸ್ಟ್ರೈಕ್ ಬಿಟ್ಟುಕೊಟ್ಟರು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಲು ಯತ್ನಿಸಿ, ಕ್ಲಾಸೆನ್ ಕ್ಯಾಚ್ಗೆ ತುತ್ತಾದರು. ಕೊನೇ ಎಸೆತದಲ್ಲಿ 5 ರನ್ ಬೇಕಿತ್ತು. ಆದ್ರೆ ಕ್ರೀಸ್ಗೆ ಬಂದ ನಾಯಕ ಪ್ಯಾಟ್ ಕಮ್ಮಿನ್ಸ್ ಬಾಲ್ ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಕೆಕೆಆರ್ ನಾಲ್ಕು ರನ್ಗಳ ರೋಚಕ ಗೆಲುವು ಸಾಧಿಸಿತು.