ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ಹಣ ನೀಡಿರುವ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ ಅಂತಾ ಮತ್ತೊಮ್ಮೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಭೂ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದರು.
Advertisement
ಬಿಜೆಪಿಯಿಂದ ಸಮಸ್ಯೆ: ಈ ವೇಳೆ ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಹಿಂದಿನ ಸರ್ಕಾರಕ್ಕೆ ದೂರದೃಷ್ಟಿ ಕೊರತೆ ಇತ್ತು. ಹೀಗಾಗಿ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಇಂದು ನಗರದಲ್ಲಿ ಸಮಸ್ಯೆ ಆಗ್ತಿದೆ ಅಂದ್ರೆ ಅದಕ್ಕೆ ಕಾರಣ ಬಿಜೆಪಿ. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ಹಣ ನೀಡಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಆರೋಪಗಳನ್ನು ಎಸಗುತ್ತಿದೆ ಅಂತಾ ವಾಗ್ದಾಳಿ ನಡೆಸಿದರು
Advertisement
ಡೈರಿ ಮುಂದಿಟ್ಟುಕೊಂಡು ಆರೋಪ: 2010ರಲ್ಲಿ ಹೆಬ್ಬಾಳ ಬ್ರಿಡ್ಜ್ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು ಬಿಜೆಪಿ ಸರ್ಕಾರ. ಆದ್ರೆ ಅಭಿವೃದ್ದಿ ಕೆಲಸಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಜನರಿಗೆ ಒಳ್ಳೆಯದಾಗಬಾರದೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಅಂತಾ ಆರೋಪಿಸುತ್ತಿದ್ದಾರೆ. ಗೋವಿಂದ ರಾಜು ಡೈರಿ ಇಟ್ಕೊಂಡು ಇದೀಗ ಸುಖಾ-ಸುಮ್ಮನೆ ಆರೋಪ ಮಾಡ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಲೇ ಡೈರಿ ನನ್ನದಲ್ಲ ನನ್ನ ಸಹಿ ಅಲ್ಲ ಅಂತಾ ಗೋವಿಂದ ರಾಜು ಹೇಳಿದ್ದಾರೆ. ಮಾತ್ರವಲ್ಲದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ 11 ತಿಂಗಳ ನಂತ್ರ ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ಅವರೇ ಡೈರಿ ತಂದಿಟ್ಟು ಈಗ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು.
Advertisement
ಕಪ್ಪು ಚುಕ್ಕೆಯಿಲ್ಲ: ಮಾರ್ಚ್ ತಿಂಗಳಿನಲ್ಲಿ ಐಟಿ ದಾಳಿ ಆಗಿರೋದು. ಆದ್ರೆ ಸೆಪ್ಟೆಂಬರ್‍ನಲ್ಲಿ ಸ್ಟೀಲ್ ಬ್ರಿಡ್ಜ್ ಟೆಂಡರ್ ಆಗಿದೆ. ಹೀಗಾಗಿ ಮಾರ್ಚ್ ನಲ್ಲೆ ಹೇಗೆ ಡೈರಿ ಬರೆಯೋಕೆ ಸಾಧ್ಯ. ಹಣ ಕೊಟ್ಟಿದ್ದಕ್ಕೆ ಸಾಕ್ಷಿ ಇದ್ರೆ ಬಿಡುಗಡೆ ಮಾಡಲಿ. ಡೈರಿಯಲ್ಲಿ 65 ಕೋಟಿ ಇದೆ ಅಂತ ಸುಳ್ಳು ಹೇಳಿ ಸಿದ್ದರಾಮಯ್ಯ ಕುಟುಂಬದ ಮೇಲೆ ಆರೋಪ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಬೇರೆ ವಿಷಯ ಇಲ್ಲ ಅಂತ ಇದೀಗ ಕಿಕ್ ಬ್ಯಾಕ್ ಪ್ರಕರಣವನ್ನಿಟ್ಟುಕೊಂಡಿದ್ದಾರೆ. ಚುನಾವಣೆಗೆ ಬೇರೆ ವಿಷಯ ಇಲ್ಲದೆ ಇಂತಹ ಆರೋಪವನ್ನು ಬಿಜೆಪಿ ಮಾಡ್ತಿದೆ ಅಂತಾ ಗುಡುಗಿದ್ರು.
Advertisement
ಮಾಧ್ಯಮದ ಮೇಲೆ ಕಿಡಿ: ಮೂರು ಮಂತ್ರಿಗಳು ಜೈಲಿಗೆ ಹೋಗ್ತಾರೆ ಅಂತ ಹೇಳಿದ್ರು ಇದುವರೆಗೂ ಯಾವುದೇ ದಾಖಲೆ ಬಿಟ್ಟಿಲ್ಲ. ಯಾರೂ ಜೈಲಿಗೂ ಹೋಗಿಲ್ಲ.400 ಕೋಟಿ ರೂ. ಸ್ಟೀಲ್ ಬ್ರಿಡ್ಜ್‍ಗೆ ಹಣ ನೀಡಿದ ದಾಖಲೆ ಇದೆ ಅಂತಾರೆ. ಸ್ಟೀಲ್ ಬ್ರಿಡ್ಜ್ ನಲ್ಲಿ ನಾವು ಅಕ್ರಮ ಮಾಡಿದ್ದೀವಿ ಅಂತ ಆರೋಪ ಸಾಬೀತು ಮಾಡಿದ್ರೆ ಏನೇ ಶಿಕ್ಷೆ ಕೊಟ್ರು ಅನುಭವಿಸುತ್ತೇನೆ. ಆದ್ರೆ ಈ ದಾಖಲೆಯನ್ನು ಕೂಡ ಬಿಟ್ಟಿಲ್ಲ. ಇವುಗಳ ಬಗ್ಗೆ ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲ್ಲ ಅಂತಾ ಹರಿಹಾಯ್ದರು.
ಬಿಡಿಎ ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿರುವ ಕುರಿತು ಮಾತನಾಡಿದ ಅವರು, ದಾಳಿ ಆದ ಅಧಿಕಾರಿಗಳ ಮೇಲೆ ರಿಪೋರ್ಟ್ ಕಳಿಸಲಿ ನಂತ್ರ ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ. ರಾಜಕೀಯ ಮಾಡಿ ಸ್ಟೀಲ್ ಬ್ರಿಡ್ಜ್ ಕ್ಯಾನ್ಸಲ್ ಮಾಡಿದ್ರು. ಪಿತೂರಿ, ಕುತಂತ್ರ ಮಾಡಿ ಯೋಜನೆ ಕೈ ಬಿಡುವಂತೆ ಬಿಜೆಪಿಯವರು ಮಾಡಿದ್ರು. ಮುಂದೆ ಜನರೇ ಅವರಿಗೆ ತಕ್ಕ ಪಾಠ ಕಲಿಸ್ತಾರೆ ಜಾರ್ಜ್ ಹೇಳಿದ್ದಾರೆ.