ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ರಾಜ್ಯದ ರೈತರು ಕುತೂಹಲ ಹೊಂದಿದ್ದಾರೆ. ಯಾರ ಖಾತೆಗೆ ಎರಡು ಸಾವಿರ ರೂಪಾಯಿ ಬಂದಿದೆ ಅಂತ ರೈತರು ಖಾತೆಗಳನ್ನ ಪರಿಶೀಲಿಸಿಕೊಳ್ಳುತ್ತಿದ್ದಾರೆ. ರಾಯಚೂರಿನ ರೈತರು ಸಹ ಸಹಾಯ ಧನದ ನಿರೀಕ್ಷೆಯಲ್ಲಿದ್ದು, ರಾಜ್ಯ ಸರ್ಕಾರ ಘೋಷಿಸಿದ ಸಾಲಮನ್ನಾಕ್ಕೆ ಕೇಳಿದಂತೆ ನಾನಾ ದಾಖಲೆಗಳನ್ನ ಕೇಳದೆ ಸುಲಭವಾಗಿ ಹಣ ನೀಡಬೇಕು ಅಂತ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಬ್ಯಾಂಕ್ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ವರ್ಗಾಯಿಸುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ 75 ಸಾವಿರ ಕೋಟಿ ಮೊತ್ತದ ಯೋಜನೆಗೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಚಾಲನೆ ನೀಡಿದ್ದಾರೆ. ಮೂರು ಕಂತುಗಳ ಪೈಕಿ ಮೊದಲ ಕಂತಿನಲ್ಲಿ 1 ಕೋಟಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ವರ್ಗಾವಣೆ ಆಗಿದೆ. ಮಾರ್ಚ್ ಅಂತ್ಯದೊಳಗೆ ಬಾಕಿ ರೈತರ ಖಾತೆಗೆ ಮೊದಲ ಕಂತು ಜಮಾ ಆಗಲಿದೆ. ಹಾಗಾದ್ರೆ ರಾಜ್ಯದ ಯಾವ್ಯಾವ ಜಿಲ್ಲೆಯ ಎಷ್ಟು ಜನ ರೈತರಿಗೆ ಕಿಸಾನ್ ಸಮ್ಮಾನ ನಿಧಿ ಸಿಕ್ಕಿದೆ ಅನ್ನೋದು ಇನ್ನೂ ಸ್ಪಷ್ಟವಾಗಬೇಕಿದೆ.
Advertisement
Advertisement
ಯಾವ ಜಿಲ್ಲೆಯಲ್ಲಿ ರೈತರಿಗೆ ಸಿಕ್ಕಿದೆ..?
ಬಾಗಲಕೋಟೆ ಜಿಲ್ಲೆಯಲ್ಲಿ 67,064 ಜನ ಸಣ್ಣ ಹಾಗೂ ಅತಿ ಸಣ್ಣ ರೈತರಿದ್ದು ಇದೂವರೆಗೆ 6,645 ಜನ ನೋಂದಣಿಯಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 25 ಸಾವಿರ ರೈತರ ನೋಂದಣಿ ಮಾಡಲಾಗಿದೆ. ಧಾರವಾಡದಲ್ಲಿ 10 ಸಾವಿರ, ಚಿತ್ರದುರ್ಗ ಜಿಲ್ಲೆಯ ಆರು ಸಾವಿರ ರೈತರು ನೋಂದಣಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ 13 ಸಾವಿರ ರೈತರ ಖಾತೆಗಳು ನೋಂದಣಿಯಾಗಿದ್ದು 3850 ರೈತರ ಖಾತೆಗೆ ಹಣ ಜಮಾ ಆಗಿದೆ. ರಾಯಚೂರು ಜಿಲ್ಲೆಯಲ್ಲಿ 6480 ರೈತರ ಖಾತೆಗಳು ನೋಂದಣಿಯಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ ರೈತರ ಖಾತೆಗೆ ಮೊದಲ ಕಂತು ಸೇರಬೇಕಿದೆ. ಹೀಗಾಗಿ ಯಾವುದೇ ಗೊಂದಲಗಳು ಇಲ್ಲದೆ ಅಧಿಕಾರಿಗಳು ಹಣ ಜಮಾ ಮಾಡಬೇಕು ಅಂತ ರಾಯಚೂರಿನಲ್ಲಿ ರೈತರು ಒತ್ತಾಯಿಸಿದ್ದಾರೆ.
Advertisement
Advertisement
ಇಂದಿನಿಂದ ರೈತರ ಸಂಪರ್ಕ ಕೇಂದ್ರ, ಬಾಪುಜಿ ಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಬಜೆಟ್ ನಲ್ಲಿ ಘೋಷಿಸಿದಂತೆ ಮೋದಿ ಯೋಜನೆ ಜಾರಿಗೆ ಮಾಡಿದ್ದಾರೆ. ಆದ್ರೆ ಇನ್ನೂ ಯಾವೆಲ್ಲ ಗೊಂದಲಗಳಿವೆಯೋ ಅಂತ ರೈತರು ಯೋಚಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv