ಮಡಿಕೇರಿ: ಮನೆಯ ಅಡುಗೆ ಕೋಣೆಯೊಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕಳೆದ ರಾತ್ರಿ ಆಹಾರ ಅರಸಿ ಬಂದಿದ್ದ 12 ಅಡಿ ಉದ್ದ ಹಾಗೂ 7 ರಿಂದ 8 ಕೆ.ಜಿ ತೂಕದ ಕಾಳಿಂಗ ಸರ್ಪ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದ ಮನೆಯೊಂದರ ಅಡುಗೆ ಕೋಣೆಯೊಳಗೆ ಹೊಕ್ಕಿತ್ತು. ತಕ್ಷಣ ಮನೆಯವರು ಸ್ನೇಕ್ ಗಗನ್ ಎಂಬವರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಗಗನ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕೊಂಡೊಯ್ದಿದ್ದಾರೆ.
Advertisement
Advertisement
ಶನಿವಾರ ಬೆಳಗ್ಗೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಬಿಡಲಾಗಿತು. ಬಹಳ ಕ್ರೂರವಾಗಿದ್ದ ಕಾಳಿಂಗ ಸರ್ಪ ಹತ್ತಿರಕ್ಕೆ ಸುಳಿದವರ ಮೇಲೆ ದಾಳಿಗೆ ಮುಂದಾಗಿ, ಎಲ್ಲರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿತ್ತು. ವಿರಾಜಪೇಟೆ ಮಾನಂದವಾಡಿ ರಾಜ್ಯ ಹೆದ್ದಾರಿಯ ಬಳಿಯ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಡುವಾಗ ಸಾಗುತ್ತಿದ್ದ ವಾಹನ ಸವಾರರು, ಪ್ರವಾಸಿಗರು ವಾಹನ ನಿಲ್ಲಿಸಿ ಕಿಂಗ್ ಕೋಬ್ರಾನನ್ನು ನೋಡಲು ಮುಗಿಬಿದ್ದರು.
Advertisement
ಶೀತಪ್ರದೇಶದಲ್ಲಿ ಹೆಚ್ಚಾಗಿರುವ ಕಾಳಿಂಗ ಸರ್ಪ ಇಲಿ, ಹೆಗ್ಗಣ, ಸಣ್ಣ ಹಾವುಗಳನ್ನು ಅರಸಿ ನಾಡಿನೆಡೆಗೆ ಹೆಚ್ಚಾಗಿ ಬರುತ್ತಿದ್ದು ಈ ಬಗ್ಗೆ ಜನರು ಎಚ್ಚರದಿಂದಿರಬೇಕು. ಹಾವುಗಳು ಕಂಡಾಗ ಅವುಗಳನ್ನು ಸಾಯಿಸದೇ ತಮಗೆ ಮಾಹಿತಿ ನೀಡಬೇಕು ಎಂದು ಸ್ನೇಕ್ ಗಗನ್ ಮನವಿ ಮಾಡಿದ್ದಾರೆ.
Advertisement
ಸ್ನೇಕ್ ಗಗನ್ ಇದುವರೆಗೂ 37ಕ್ಕೂ ಅಧಿಕ ಕಿಂಗ್ ಕೋಬ್ರಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದು, 4 ಸಾವಿರಕ್ಕೂ ಅಧಿಕ ಇತರೆ ಹಾವುಗಳನ್ನು ಹಿಡಿದು ರಕ್ಷಿಸುವ ಮೂಲಕ ಹಾವುಗಳನ್ನು ಕೊಲ್ಲದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
https://www.youtube.com/watch?v=l0jPEE3OHSI&feature=youtu.be