ಮೈಸೂರು: ನನ್ನ ಮಗನ ಕೊಲೆಯಾಗಿದೆ ಎಂದು ಮೃತ ಕಿಕ್ ಬಾಕ್ಸರ್ ನಿಖಿಲ್ ತಂದೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಿಲ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ಕ್ರೀಡೆಯ ಆಯೋಜನೆ ಮಾಡಲಾಗಿದೆ. ಕಿಕ್ ಬಾಕ್ಸಿಂಗ್ ಬಗ್ಗೆ ಜ್ಞಾನವೇ ಇಲ್ಲದವರು ಆಯೋಜನೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಕೇವಲ ಹಣಕ್ಕಾಗಿ ಈ ರೀತಿಯ ಕ್ರೀಡೆಗಳನ್ನ ಆಯೋಜನೆ ಮಾಡಲಾಗುತ್ತೆ. ಇದಕ್ಕೆ ಕೋಚ್ ವಿಕ್ರಮ್, ಮತ್ತು ಆಯೋಜಕರು ಕಾರಣ. ಇಂತಹ ಕ್ರೀಡೆಗಳಿಗೆ ಪೋಷಕರು ಉತ್ತೇಜನ ನೀಡಬೇಡಿ ಎಂದು ಮಗನ ಕಳೆದುಕೊಂಡ ದುಃಖದಲ್ಲಿರುವ ಸುರೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಆಟವಾಡ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು
ನಡೆದಿದ್ದೇನು..?
ಇದೇ ತಿಂಗಳ 10ರಂದು ಬೆಂಳೂರಿನ ಕೆಂಗೇರಿಯಲ್ಲಿ ಏ 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ಆಯೋಜನೆಗೊಂಡಿತ್ತು. ಈ ವೇಳೆ ರಿಂಗ್‍ನಲ್ಲಿ ಸೆಣೆಸಾಡುತ್ತಿದ್ದಂತೆ ಎದುರಾಳಿಯ ಏಟಿಗೆ ನಿಖಿಲ್ (24) ಗಂಭೀರ ಗಾಯಗೊಂಡಿದ್ದರು. ಎದುರಾಳಿ ತಲೆಗೆ ಹೊಡೆದ ಒಂದೇ ಏಟಿಗೆ ಬಾಕ್ಸಿಂಗ್ ರಿಂಗ್ ನಲ್ಲಿಯೇ ನಿಖಿಲ್ ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಕೋಮಾದಲ್ಲಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದಾರೆ.