ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraaj Kumar), ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ ‘ಕರಟಕ ದಮನಕ’ (Karataka Damanaka) ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಮಾರ್ಚ್ 8 ಮಹಾ ಶಿವರಾತ್ರಿ ಶುಭದಿನದಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಮೊನ್ನೆಯಷ್ಟೇ ಈ ಚಿತ್ರದ ಎರಡನೇ ಗೀತೆ ಡೀಗ ಡಿಗರಿ ಅಬುದಾಬಿಯಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು ಕರಟಕ ದಮನಕ ಎನ್ನುತ್ತಾರೆ. ಅಬುದಾಬಿಯಲ್ಲಿ ನಮ್ಮ ಚಿತ್ರಕ್ಕಾಗಿ ನಾನೇ ಬರೆದಿರುವ ಎರಡನೇ ಹಾಡು ಡೀಗ ಡಿಗರಿ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ. ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ ಎಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಇನ್ನು ಪ್ರಭುದೇವ ಅವರ ಜೊತೆ ಮೊದಲ ಬಾರಿ ನಟಿಸಿರುವುದು ಖುಷಿಯಾಗಿದೆ ಎನ್ನುವುದು ಶಿವರಾಜಕುಮಾರ್ ಮಾತು.