CinemaDistrictsKarnatakaLatestMain PostSandalwoodUdupi

ನಮ್ಮ ಸಿನೆಮಾ ರಾಷ್ಟ್ರಮೀರಿ ಹೋಗೋದನ್ನು ಹಿಂದಿವಾಲಾಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ: ಕರವೇ ಪ್ರವೀಣ್ ಶೆಟ್ಟಿ

ಉಡುಪಿ: ಕನ್ನಡದ ಸಿನಿಮಾಗಳು ರಾಷ್ಟ್ರವನ್ನು ಮೀರಿ ಹೋಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಹಿಂದಿವಾಲಾಗಳಿಗೆ ಆಗುತ್ತಿಲ್ಲ. ಆದ್ದರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮಾತೃಭಾಷೆ ಕನ್ನಡ ಕುರಿತಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಟ್ವೀಟ್ ವಾರ್ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುದೀಪ್ ಗಂಡಸ್ತನದ ಧ್ವನಿಯಲ್ಲಿ ಮಾತನಾಡಿದ್ದಾರೆ. ತನ್ನ ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದಾರೆ. ಇಡೀ ಕನ್ನಡಿಗರು ಅವರ ಬೆಂಬಲಕ್ಕೆ ನಿಂತಿದ್ದೇವೆ. ಅಜಯ್ ದೇವಗನ್ ಮೊದಲು ಆಲೋಚನೆ ಮಾಡಬೇಕು, 22 ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ಅದರಲ್ಲಿ ಹಿಂದಿಯೂ ಕೂಡ ಒಂದು ಅಷ್ಟೇ. ಯಾವುದೇ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

ಕನ್ನಡಕ್ಕೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ. ಅಜಯ್ ದೇವಗನ್‍ಗೆ ನಾವು ಎಚ್ಚರಿಕೆ ಕೊಡುತ್ತೇವೆ. ಹಿಂದಿಯಲ್ಲಿ ಡಬ್ ಮಾಡಿ ಬಿಡ್ತೀರಾ ಎಂದು ಅಜಯ್ ದೇವಗನ್ ಕೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕ ಕನ್ನಡಿಗರನ್ನು ಬಿಟ್ಟು ಯಾವತ್ತೂ ಭಾರತದೇಶ ಆಗಿಲ್ಲ. ಕನ್ನಡಿಗರನ್ನು ಕೆಣಕಲು ಬಂದರೆ ರಕ್ಷಣಾ ವೇದಿಕೆ ಕೈಕಟ್ಟಿ ಕೊರಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

ಅಜಯ್ ದೇವಗನ್ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ, ಅಜಯ್ ದೇವಗನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಅವರ ಸಿನಿಮಾ ಕರ್ನಾಟಕಕ್ಕೆ ಕಾಲಿಡಲು ಬಿಡಲ್ಲ. ಸರ್ಕಾರ ಕನ್ನಡಿಗರ ಪರವಾಗಿ ಗಮನಹರಿಸಬೇಕು. ನಾವೆಲ್ಲ ಕನ್ನಡಿಗರು ಒಗ್ಗಟಾಗಿ ಹಿಂದಿಯನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೇವೆ. ಹಿಂದಿಯನ್ನು ನಮ್ಮ ಮೇಲೆ ಹೇರಿ ಉದ್ಯೋಗ ಬದುಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು. ಎಲ್ಲಾ ರಾಜಕೀಯ ಮುಖಂಡರು, ನಟರು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

Leave a Reply

Your email address will not be published.

Back to top button