ಬೆಂಗಳೂರು: ಸುದೀಪ್ ಅವರು ಚಿತ್ರರಂಗ ಎಂಟ್ರಿ ಕೊಟ್ಟು 22 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಸುದೀಪ್ ತಮ್ಮ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನ ಗಳಿಸಿ ಅವರಿಂದಲೇ `ಅಭಿನಯ ಚಕ್ರವರ್ತಿ’ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಸುದೀಪ್ ಅಭಿನಯದಲ್ಲಿ ಮಾತ್ರವಲ್ಲದೆ ತೆರೆಯ ಹಿಂದೆ ಅಪಾರವಾದ ಕೆಲಸವನ್ನು ಮಾಡಿದ್ದಾರೆ. ಅತ್ಯುತ್ತಮ ನಟ, ಹಾಡುಗಾರ, ಬರಹಗಾರ, ನಿರ್ದೇಶಕ, ನಿರ್ಮಾಪಕ, ಉತ್ತಮ ಮಾತುಗಾರ ಹೀಗೆ ತಮ್ಮ ಪ್ರತಿಭೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಅವರ ಹೆಜ್ಜೆ ಗುರುತುಗಳಿವೆ.
ಸಮಾಜಸೇವೆಗೂ ಸ್ಫೂರ್ತಿ ಆಗಿರುವ ಕಿಚ್ಚ ಸುದೀಪ್, ಸಿನಿಮಾ ರಂಗಕ್ಕೆ ಬಂದು ಇಂದಿಗೆ 22 ವರ್ಷಗಳು ಕಳೆದಿವೆ. ಸಿನಿಮಾರಂಗದಲ್ಲಿ ಅನೇಕ ಸೋಲು-ಗೆಲುವುಗಳ ಮೆಟ್ಟಿಲುಗಳನ್ನ ದಾಟಿ ಬಂದಿರುವ ಅಭಿನಯ ಚಕ್ರವರ್ತಿ ತಮ್ಮ ಅನುಭವವನ್ನ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ಪತ್ರದಲ್ಲಿ ಕಿಚ್ಚ ಸುದೀಪ್ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. `ನಾನು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, 1996ರಲ್ಲಿ, ಬ್ರಹ್ಮ ಸಿನಿಮಾದ ಚಿತ್ರೀಕರಣಕ್ಕಾಗಿ. ಈ ಚಿತ್ರದ ಮೂಲಕ ಸಿನಿಮಾರಂಗದಲ್ಲಿ ನನ್ನ ಪ್ರಯಾಣವನ್ನ ಶುರು ಮಾಡಿದೆ. ಇದಕ್ಕೂ ಮುನ್ನ ನಾನು ನನ್ನ ತಂದೆಯ ಜೊತೆ, ಸ್ನೇಹಿತರ ಜೊತೆ ಚಿತ್ರೀಕರಣದ ಸ್ಥಳಕ್ಕೆ ಹೋದಾಗ ಆಕ್ಷನ್ -ಕಟ್‍ನಲ್ಲಿ ಭಾಗಿ ಆಗುವ ಅನುಭವ ಮಾತ್ರ ಅದ್ಭುತವಾಗಿತ್ತು.
ಚಿತ್ರದಲ್ಲಿ ಅಣ್ಣನ ಪಾತ್ರ ಮಾಡಿದ್ದ ಅಂಬರೀಶ್, ಮಾವನ ಆಶೀರ್ವಾದವನ್ನ ಪಡೆಯುವ ದೃಶ್ಯದ ಚಿತ್ರೀಕರಣ ಇತ್ತು. ಅದು ತುಂಬಾ ಸುಲಭವಾದುದ್ದು, ಆದರೆ ನನಗೆ ಅದು ಸುಲಭವಾಗಿರಲಿಲ್ಲ. ಆ ದೃಶ್ಯ ಮಾಡಲು ನಾನು ಅನೇಕ ಟೇಕ್‍ಗಳನ್ನು ತೆಗೆದುಕೊಂಡಿದ್ದೆ. ಅಂದು ಅನೇಕರು ನನ್ನ ಮೇಲೆ ಅನುಮಾನ ಇಟ್ಟುಕೊಂಡಿದ್ದರು. ಆದನೆ ನಿಧಾನವಾಗಿ ನಾನು ಎಲ್ಲವನ್ನು ಕಲಿಯುತ್ತಾ ಬಂದೆ.
ಇಂದಿಗೆ ನನ್ನ ಸಿನಿಮಾ ವೃತ್ತಿ ಜೀವನದ ಪಯಣಕ್ಕೆ 22 ವರ್ಷ ತುಂಬಿದೆ. ಈ ಪ್ರಯಾಣದಲ್ಲಿ ಪಾಲುದಾರರಾದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮಗಳು, ವಿತರಕರು, ಪ್ರದರ್ಶಕರು ಸೇರಿದಂತೆ ಅವರ ಜೊತೆ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಅರ್ಪಿಸುತ್ತೇನೆ.
ಸಿನಿಮಾ ಎಂಬುದು ನನ್ನ ಜೀವನದಲ್ಲಿ ಅತ್ಯಂತ ಸುಂದರ ಸಂಗತಿ. ಮುಖ್ಯವಾಗಿ ಇಂದು ನಾನು ಏನಾಗಿದ್ದೇನೋ ಅದು ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆಯಾಗಿದೆ ಎಲ್ಲರಿಗೂ ಧನ್ಯವಾದಗಳು.
ನನ್ನ ಈ ಬೆಳವಣಿಗೆ ಕಾರಣವಾದ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಈ ಸಾಧನೆಗೆ ತನ್ನ ಕುಟುಂಬದವರು ತುಂಬಾ ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಸೋತನಾಗ ನನ್ನ ಜೊತೆ ನಿಂತಿದ್ದ ಚಿತ್ರತಂಡ ಹಾಗೂ ಅಭಿಮಾನಿಗಳಿಗೆ ನಾನು ಯಾವಾಗ್ಲೂ ಚಿರಋಣಿಯಾಗಿರುತ್ತೇನೆ. ತುಂಬು ಪ್ರೀತಿಯ ಮತ್ತು ಅಪ್ಪುಗೆಯ ಕಿಚ್ಚ ಸುದೀಪ್. ಅಂತ ಪತ್ರದಲ್ಲಿ ಬರೆದುಕೊಂಡಿದ್ದಾರೆ.
22ರ ಸಂಭ್ರಮದಲ್ಲಿ ಕಿಚ್ಚ ಸುದೀಪ್ ತಮ್ಮ ಅನುಭವವನ್ನ ಚಿಕ್ಕದಾಗಿ ಬರೆದಿದ್ದಾರೆ. ಈ ಸಿನಿಮಾ ಪ್ರಯಾಣ ಹೀಗೆ ಮುಂದುವರೆಯಲಿದೆ ಎಂದಿದ್ದು, ಸದ್ಯಕ್ಕೆ ಬಿಗ್ ಬಾಸ್ ಮುಗಿಸಿರುವ ಕಿಚ್ಚ ಇನ್ನು ಕೆಲವೇ ದಿನಗಳಲ್ಲಿ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ.