ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ

Public TV
3 Min Read
KGF B

ವಿಶೇಷ ವರದಿ:

ಕೆಜಿಎಫ್ ಸಿನಿಮಾ ನೋಡಿದವರಿಗೆ ಪ್ರತಿಯೊಂದು ದೃಶ್ಯದಲ್ಲಿ ಆರು ಅಡಿ ಎತ್ತರದ ಗಡ್ಡಧಾರಿಗಳು ಕಾಣಿಸುತ್ತಾರೆ. ಸಿನಿಮಾಗಾಗಿ ಗಡ್ಡ ಬಿಟ್ಟಿದ್ದ ಕಲಾವಿದರು ಕುಟುಂಬಸ್ಥರಿಂದ ಬೈಯಿಸಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಎಲ್ಲ ನಟರು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಆಡಿಷನ್ ಬಂದಾಗ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಶೇವಿಂಗ್ ಮಾಡಕೂಡದು ಎಂಬ ಕಂಡೀಷನ್ ಹಾಕಿದ್ದಾರಂತೆ. ಸಿನಿಮಾ ಮುಗಿಯುವವರೆಗೂ ಕೇವಲ ಟ್ರಿಮ್ ಮಾಡಿಕೊಳ್ಳಬೇಕು ಅಂತಾ ಸೂಚಿಸಿದ್ದರಂತೆ.

ಗರುಡ/ರಾಮ್: ಆಡಿಷನ್ ನೀಡಿ ಆಯ್ಕೆಯಾದಾಗ ಪ್ರಶಾಂತ್ ನೀಲ್ ಗಡ್ಡ ಬಿಡಬೇಕೆಂದು ಹೇಳಿದರು. ನಾನು ನಿರ್ದೇಶಕರು ಹೇಳಿದಂತೆ ಗಡ್ಡ ಬಿಟ್ಟೆ. ನನ್ನ ಮಗನಿಗೆ ಎರಡೂವರೆ ವರ್ಷ ಆತ ನನ್ನನ್ನು ಗಡ್ಡದಲ್ಲಿಯೇ ನೋಡಿದ್ದಾನೆ. ನನ್ನ ಗಡ್ಡ ನೋಡಿದ ನೆರೆಹೊರೆಯಯವರು ಏನಾಯ್ತು ಇವನಿಗೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಮನೆಗೆ ಯಾರಾದರೂ ಗೆಸ್ಟ್ ಬಂದರೆ ಹೊರ ಹೋಗ್ತಿದ್ದೆ. ಎಲ್ಲರೂ ಹೋದ ಮೇಲೆ ಮನೆಯಿಂದ ಫೋನ್ ಮಾಡಿ ಹೇಳೋರು. ಎಲ್ಲರು ಹೋದ್ರು ಬನ್ನಿ ಅಂದಾಗ ಹೋಗ್ತಿದ್ದೆ ಅಂತಾ ರಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

kgf

ಸಿನಿಮಾಗೂ ಮುನ್ನ ತುಂಬಾ ನಗ್ತಾ ಇದ್ದೆ. ಶೂಟಿಂಗ್ ಆರಂಭಕ್ಕೂ ಮುನ್ನ ಪ್ರಶಾಂತ್ ಸರ್ ಆರು ತಿಂಗಳು ನಗಬೇಡ ಅಂತಾ ಹೇಳಿದರು. ಅವರ ಮಾತಿನಂತೆ ನನ್ನ ಮಾತುಗಳನ್ನು ಕಡಿಮೆ ಮಾಡಿಕೊಂಡೆ. ಪ್ರತಿಯೊಂದು ಹಂತದಲ್ಲಿಯೂ ಪ್ರಶಾಂತ್ ಸರ್ ನಮ್ಮನ್ನು ತಿದ್ದಿ ತೀಡಿದ್ದಾರೆ. ಆರು ತಿಂಗಳ ನಂತರ ಸಿನಿಮಾಗೆ ಮಾಸ್ ಲುಕ್ ಬಂತು ಅಂತಾ ಅಂದ್ರು.

ವಿನಯ್:
ನಾನು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಕಾರ್ಪೋರೇಟರ್ ಲುಕ್ ನಲ್ಲಿ ಕ್ಲೀನ್ ಶೇವಿಂಗ್ ಇರುತ್ತಿತ್ತು. ವರ್ಕ್ ಶಾಪ್‍ಗೆ ಬಂದಾಗ ಡೈಲಾಗ್ ಕೊಟ್ಟರು ಹೇಳಿದೆ. ಮೊದಲ ದಿನವೇ ಪ್ರಶಾಂತ್ ಸರ್ 20 ನಿಮಿಷ ಕ್ಲಾಸ್ ತೆಗೆದುಕೊಂಡರು. ನಾನು ಕೆಲಸ ಮಾಡತಕ್ಕಂತಹ ಸ್ಥಳದಲ್ಲಿ ನಾನೇ ಯಾಕೆ ಶೇವ್ ಮಾಡಿಲ್ಲ ಅಂತ ಪ್ರಶ್ನೆ ಮಾಡಬೇಕಿತ್ತು. ಆದ್ರೆ ನನ್ನ ಗಡ್ಡ ನೋಡಿಕೊಂಡು ಸುಮ್ಮನಾಗುತ್ತಿದ್ದೆ. ಸಿನಿಮಾಗಾಗಿ ಗಡ್ಡ ಬಿಡ್ತಿದ್ದೇನೆ ಅಂತಾ ಚೇರ್‍ಮೆನ್ ಅವರಿಂದ ಪರ್ಮಿಷನ್ ತೆಗೆದುಕೊಂಡಿದ್ದರಿಂದ ಯಾರು ನನ್ನನ್ನು ಪ್ರಶ್ನೆ ಮಾಡುತ್ತಿರಲಿಲ್ಲ.

kgf F

ಲಕ್ಕಿ:
ನಾನು ಐಟಿ ಸೆಕ್ಟರ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುವಂತಹ ವ್ಯಕ್ತಿ. ಯಾವತ್ತೂ ಗಡ್ಡ ಮೀಸೆ ಬಿಟ್ಟವನು ನಾನಲ್ಲ. ಪ್ರಶಾಂತ್ ಸರ್ ಫೋನ್ ಮಾಡಿ ನನ್ನ ಆಸೆ ಹೇಳಿದಾಗ, ಸಂಜಯ ನಗರ ಆಫೀಸಿಗೆ ಹೋಗಿ ಅಲ್ಲಿ ನಿಮಗೆ ನನ್ನ ಸಹಾಯಕರು ತರಬೇತಿ ಕೊಡ್ತಾರೆ. ಆದ್ರೆ ಎರಡು ಕಂಡೀಷನ್ ಹಾಕಿದರು. ಒಂದು ಗಡ್ಡ ಮತ್ತು ಮೀಸೆ ಬಿಡಬೇಕು, ಇನ್ನೊಂದು ತರಬೇತಿಯಲ್ಲಿ ನಮ್ಮ ಚಿತ್ರಕ್ಕೆ ನೀವು ಸೂಟ್ ಆಗಲಿಲ್ಲ ಅಂದ್ರೆ ಚಾನ್ಸ್ ನೀಡೊದಕ್ಕೆ ಸಾಧ್ಯವಿಲ್ಲ. ಸಿನಿಮಾಗೆ ಚಾನ್ಸ್ ಕೊಟ್ಟಿಲ್ಲ ದೋಸ್ತಿ ಬಿಡುವಂತಿಲ್ಲ ಅಂತಾ ಹೇಳಿದ್ದರು. 2016ರಲ್ಲಿಯೇ ನಾನು ಗಡ್ಡ ಮತ್ತು ಮೀಸೆಗೆ ಸಂಪೂರ್ಣ ಕತ್ತರಿ ಹಾಕದೇ ಕೇವಲ ಟ್ರಿಮ್ ಮಾಡಿಕೊಂಡು ಬಂದಿದ್ದೇನೆ.

kgf a

ಅವಿನಾಶ್:
ನನಗೆ ಗಡ್ಡ ಬಿಡೋದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಕಾರಣ ನಾನು ಸ್ವಂತ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದೇನೆ. ಬಾಸ್ ನಾನೇ ಆಗಿದ್ದರಿಂದ ಯಾರು ಪ್ರಶ್ನೆ ಮಾಡಲಿಲ್ಲ. 2015 ಅಕ್ಟೋಬರ್ ನಿಂದಲೇ ತರಬೇತಿ ತೆಗೆದುಕೊಳ್ಳಲು ಆರಂಭಿಸಿದಾಗ, ನಾವೇನು ಮಾಡುತ್ತಿದ್ದೇವೆ, ಯಾವುದಕ್ಕೆ ಈ ಎಲ್ಲ ತರಬೇತಿ ಅಂತಾ ಗೊತ್ತಾಗುತ್ತಿರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ನಮ್ಮ ನಿಜ ಜೀವನದಲ್ಲಿ ಆ ಪಾತ್ರವನ್ನು ತರಿಸಿದ್ದರು. ಇದನ್ನೂ ಓದಿ: ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ

avinash kgf

ಶೂಟಿಂಗ್ ಆರಂಭಕ್ಕೂ ಮುನ್ನವೇ ಕಥೆಗೆ ಬೇಕಾದ ಪಾತ್ರಗಳನ್ನು ಪ್ರಶಾಂತ್ ನೀಲ್ ಸೃಷ್ಟಿಸಿಕೊಂಡಿದ್ದರು ಎಂಬುದು ಕಲಾವಿದರ ಮಾತುಗಳಲ್ಲಿ ಗೊತ್ತಾಗುತ್ತದೆ. ಚಿತ್ರದ ಮತ್ತೋರ್ವ ನಟ ವಶಿಷ್ಟ ಹೇಳುವಂತೆ ನಿರ್ದೇಶಕರು ಫೇಮಸ್ ಆಗಿರುವ ಕಲಾವಿದರನ್ನು ಚಿತ್ರಕ್ಕಾಗಿ ಕರೆತರಲಿಲ್ಲ. ಕಥೆಗೆ ಬೇಕಾದ ಪಾತ್ರಗಳಿಗಾಗಿ ಹುಡುಕಾಟ ನಡೆಸಿ, ತರಬೇತಿ ಕೊಟ್ಟು ಚಿತ್ರಕ್ಕಾಗಿ ಎರಡ್ಮೂರು ವರ್ಷ ಕೆಲಸ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *