Saturday, 7th December 2019

ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ

-ಕೆಜಿಎಫ್ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದನ್ನು ಬಿಚ್ಚಿಟ್ಟ ವಿಲನ್‍ಗಳು

ವಿಶೇಷ ವರದಿ
ಕೆಜಿಎಫ್ ಚಿತ್ರತಂಡದ ಕಲಾವಿದರೇ ಸಿನಿಮಾದ ಪ್ಲಸ್ ಪಾಯಿಂಟ್. ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಮುಖಗಳನ್ನು ಚಂದನವನಕ್ಕೆ ಪರಿಚಯಿಸಿದ್ದಾರೆ. ಚಿತ್ರದುದ್ದಕ್ಕೂ ನಿಮಗೆ ಆರು ಅಡಿ ಎತ್ತರದ ಗಡ್ಡದಾರಿಗಳು ಕಾಣ ಸಿಗುತ್ತಾರೆ. ಕೆಜಿಎಫ್ ಕಲಾವಿದರಿಗಾಗಿ ಸಿನಿಮಾವನ್ನು ಮಾಡಿಲ್ಲ. ಕಥೆಗಾಗಿಯೇ ಹೊಸ ಕಲಾವಿದರಿಗೆ ಕೆಜಿಎಫ್ ಜನ್ಮ ನೀಡಿದೆ ಅಂತಾ ಹೇಳಿದ್ರೆ ತಪ್ಪಾಗಲಾರದು. ಸಿನಿಮಾದ ಚಿಕ್ಕ ಪಾತ್ರದಲ್ಲಿಯೂ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಕಲಾವಿದ ನೋಡುಗರಿಗೆ ಇಷ್ಟವಾಗುತ್ತಾನೆ. ಇನ್ನು ವಿಲನ್ ಪಾತ್ರಗಳಲ್ಲಿ ಮಿಂಚಿರುವ ರಾಮ್, ವಿನಯ್, ಲಕ್ಕಿ, ಅವಿನಾಶ್ ಮತ್ತು ವಶಿಷ್ಠ ಎಲ್ಲರು ಕೆಜಿಎಫ್ ಚಿತ್ರ ಯಶಸ್ಸಿನ ಮತ್ತೊಂದು ಕಾರಣ. ನಟ ವಷಿಷ್ಠ ತಮ್ಮ ಕಂಚಿನ ಕಂಠದ ಮೂಲಕವೇ ಗುರುತಿಸಿಕೊಂಡ ಕಲಾವಿದ. ಇನ್ನುಳಿದ ನಾಲ್ವರಿಗೂ ಕೆಜಿಎಫ್ ಮೊದಲ ಚಿತ್ರವಾಗಿದ್ದರೂ, ಯಾವ ಅನುಭವಿ ನಟರಿಗೂ ಕಡಿಮೆ ಇಲ್ಲ ಎಂಬಂತೆ ನಟಿಸಿದ್ದಾರೆ. ಹಾಗಾದ್ರೆ ಎಲ್ಲ ಕಿಲಾಡಿಗಳಿಗೆ ಸಿನಿಮಾ ಸಿಕ್ಕಿದ್ದು ಹೇಗೆ ಎಂಬುದರ ಕಥೆ ಇಲ್ಲಿದೆ.

1. ರಾಮ್:
ನಾನು ಈ ರೀತಿ ಮೈಲಿಗಲ್ಲು ಸಿಕ್ಕಿದೆ ಎಂಬುವುದೇ ಖುಷಿ. ನಾನು ಯಶ್ ಜೊತೆ 12 ವರ್ಷಗಳ ಒಡನಾಟ. ನನ್ನ ಕೆಲಸ ಸಾರ್ವಜನಿಕ ಸ್ಥಳಗಳಲ್ಲಿ ಯಶ್ ಅವರಿಗೆ ರಕ್ಷಣೆ ಮಾಡುವುದು. ಯಶ್ ಅಂದ ಕೂಡಲೇ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನಾನು ಎಲ್ಲರ ಪಕ್ಕಕ್ಕೆ ತಂದು ನಿಲ್ಲಿಸುತ್ತಿದ್ದೆ. ಕೆಲವೊಂದು ಸಾರಿ ನಾನು ಅಭಿಮಾನಿಗಳ ಮೇಲೆ ಕೋಪಗೊಂಡಾಗ, ಯಶ್ ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಗದರಬೇಡಿ ಅಂತಾ ಹೇಳುತ್ತಿದ್ದರು. ಯಶ್ ಅವರ ಈ ಸರಳತೆಗೆ ನಾನು ಸಂಪೂರ್ಣ ಮಾರುಹೋಗಿದ್ದೆ.

ಒಂದು ದಿನ ಯಶ್ ಜೊತೆಗಿದ್ದಾಗ ಪ್ರಶಾಂತ್ ನೀಲ್ ಸಿಕ್ಕರು. ನನ್ನನ್ನು ನೋಡಿದ ಪ್ರಶಾಂತ್ ನೀಲ್ ಸಿನಿಮಾ ಆಫರ್ ನೀಡಿದರು. ಯಶ್ ಅವರ ಜೊತೆಗಿದ್ದಕ್ಕೆ ಪ್ರಶಾಂತ್ ನೀಲ್ ಸಿಕ್ಕರು. ಯಶ್ ಅವರು ಇಲ್ಲ ಅಂದಿದ್ರೆ ನನಗೆ ಈ ಪಾತ್ರವೇ ಸಿಗುತ್ತಿರಲಿಲ್ಲ ಅಂತಾ ರಾಕಿಂಗ್ ಸ್ಟಾರ್ ಸಹಾಯವನ್ನು ರಾಮ್ ನೆನಪಿಸಿಕೊಳ್ತಾರೆ.

ರಾಮ್

2. ವಿನಯ್:
ಯಶ್ ಅವರಿಗೆ ನಾನು ಮೊಗ್ಗಿನ ಮನಸು ಚಿತ್ರದಿಂದ ಪರಿಚಯ. ಹೀಗೆ ಅವರ ಜೊತೆ ಒಡನಾಡ ಇತ್ತು. ಮಿ. ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಫರಾನ್ ಎಂಬ ಸಣ್ಣ ಪಾತ್ರ ಮಾಡಿದೆ. ಅಲ್ಲಿಂದ ನನ್ನ ಸಿನಿಮಾ ಪಯಣ ಆರಂಭ ಆಯ್ತು. ಒಂದು ದಿನ ಕೆಜಿಎಫ್ ಸಿನಿಮಾದ ಆಡಿಷನ್ ಆರಂಭವಾಗಿದೆ ಎಂದು ಸೂರಿ ಸರ್ ಹೇಳಿದಾಗ ಹೋಗಿ ಟ್ರೈ ಮಾಡಿದೆ. ಒಂದೆರೆಡು ಬಾರಿ ಬ್ರೇಕ್ ತೆಗೆದುಕೊಂಡು ಆಡಿಷನ್ ಕೊಟ್ಟಾಗ ನಾನು ಕೆಜಿಎಫ್ ಚಿತ್ರಕ್ಕೆ ಆಯ್ಕೆಯಾದೆ ಎಂದು ವಿನಯ್ ಹೇಳ್ತಾರೆ.

ವಿನಯ್

3. ಲಕ್ಕಿ:
ಜನರು ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬರ್ತಾರೆ. ನಮಗೆ ಮೊದಲ ಚಿತ್ರವೇ ಎಲ್ಲವನ್ನು ನೀಡಿದೆ. ನಾನೋರ್ವ ಸಾಫ್ಟ್ ವೇರ್ ಇಂಜಿನೀಯರ್ ಆಗಿದ್ದು, ಇಂದಿಗೂ ನಾನು ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದೇನೆ. ನನಗೆ 20 ವರ್ಷವಿದ್ದಾಗ ಕೆಲವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ. ಮೊದಲಿನಿಂದಲೂ ಹಿರಿ ಪರದೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು. 2018ರಲ್ಲಿ ಕೆಜಿಎಫ್ ಸಿನಿಮಾ ಸಿಕ್ತು.

ಲಕ್ಕಿ

4. ಅವಿನಾಶ್:
ನಾನೋರ್ವ ಬಿಸಿನೆಸ್ ಮ್ಯಾನ್ ಆಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಿಕೊಂಡು ಹೋಗುತ್ತಿದ್ದೇನೆ. ತುಂಬಾ ವರ್ಷಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು. ಆದ್ರೆ ಈ ವಯಸ್ಸಲ್ಲಿ ಅವಕಾಶ ನೀಡಿ ಎಂದು ಹೇಳಲು ಧೈರ್ಯ ಇರಲಿಲ್ಲ. ಒಂದು ದಿನ ನಿರ್ದೇಶಕ ಪಣಗಾಭರಣ ಅವರು ಛಾಯಾಗ್ರಾಹಕ ಭುವನ್ ಗೌಡ ಅವರನ್ನು ಪರಿಚಯಿಸಿದರು. ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇದೆ. ನನ್ನ ಫೋಟೊ ಶೂಟ್ ಮಾಡ್ತೀರಾ ಅಂತಾ ಕೇಳಿದಾಗ ಓಕೆ ಅಂದ್ರು.

ಫೋಟೋ ಬಂದ ಮೇಲೆ ಭುವನ್ ಗೌಡ, ನಾನು ಕೆಜಿಎಫ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಸಾರಿ ನಿಮ್ಮ ಫೋಟೋಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತೋರಿಸ್ತಿನಿ. ಒಂದು ವೇಳೆ ಪ್ರಶಾಂತ್ ನೀಲ್ ಒಪ್ಪಿದ್ರೆ ನಿಮ್ಮ ಇಷ್ಟ ಅಂತಾ ಹೇಳಿದರು. ಪ್ರಶಾಂತ್ ಸರ್ ಫೋಟೋಗಳನ್ನು ನೋಡಿ ಒಪ್ಪಿಕೊಂಡು ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು.

ಅವಿನಾಶ್

ಈ ಸಿನಿಮಾದಲ್ಲಿ ನಟಿಸಿದ ಪ್ರತಿ ಕಲಾವಿದರಿಗೂ ಕೆಜಿಎಫ್ ಒಂದು ಮೈಲಿಗಲ್ಲು. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ, ಮುಂದೆ ಅವರನ್ನು ಕೆಜಿಎಫ್ ಪಾತ್ರದ ಹೆಸರಿನಿಂದಲೇ ಗುರುತಿಸುವಷ್ಟು ಸಿನಿಮಾ ಹೆಮ್ಮರವಾಗಿ ಬೆಳೆದಿದೆ. ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆ ಬರೆದು ಚಿತ್ರ ಜೇಬು ತುಂಬಿಸಿಕೊಳ್ಳುವುದರ ಜೊತೆಗೆ ನವ ಕಲಾವಿದರಿಗೆ ಹೊಸ ಜೀವನವನ್ನು ನೀಡಿರೋದು ಸತ್ಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *