ಬೆಂಗಳೂರು: ಕಾಂಗ್ರೆಸ್(Congress) ವಿರುದ್ಧ ಎಂಆರ್‌ಟಿ ಮ್ಯೂಸಿಕ್(MRT Music) ನ್ಯಾಯಾಂಗ ನಿಂದನೆ(Contempt of Court ) ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಹೈಕೋರ್ಟ್‌ನಲ್ಲಿ(High Court) ನಡೆದ ವಿಚಾರಣೆ ವೇಳೆ ಕೆಜಿಎಫ್ ಚಾಪ್ಟರ್ 2(KGF 2) ಸಿನಿಮಾದ ಹಾಡು ತೆಗೆಯುತ್ತೇವೆಂದು ಕಾಂಗ್ರೆಸ್ ಮುಚ್ಚಳಿಕೆ ನೀಡಿತ್ತು. ಆದರೆ ಈ ಹಾಡನ್ನು ಇನ್ನೂ ತೆಗೆದಿಲ್ಲ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ.
Advertisement
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ದ್ವಿಸದಸ್ಯ ಪೀಠ ರಾಹುಲ್ ಗಾಂಧಿ (Rahul Gandhi), ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (Supriya) ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್(Jairam Ramesh) ಅವರಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿಯ ಮುಂದಿನ ವಿಚಾರಣೆ ಜನವರಿ 12ಕ್ಕೆ ನಡೆಯಲಿದೆ.
Advertisement
Advertisement
ಏನಿದು ಪ್ರಕರಣ?:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಂಸ್ಥೆಯ ಅನುಮತಿ ಇಲ್ಲದೇ ಕೆಜಿಎಫ್ ಹಾಡನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಬಳಸಿದೆ. ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವ ಎಂಆರ್‌ಟಿ ಸಂಸ್ಥೆಯು ರಾಹುಲ್ ಗಾಂಧಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ, ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು.
Advertisement
ಕೆಜಿಎಫ್ ಹಾಡನ್ನು ಕಾಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ಟಿಟ್ಟರ್, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಳಸಲಾಗಿದೆ. ನಮ್ಮ ಸಂಸ್ಥೆಯ ಅನುಮತಿ ಪಡೆಯದೇ ಕಾಪಿರೈಟ್ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಸ್ಥೆ ಬಳಿಕ ಕೋರ್ಟ್ ಮೊರೆ ಹೋಗಿತ್ತು. ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಟ್ವಿಟ್ಟರ್ ಕಂಪನಿಗೆ ಬೆಂಗಳೂರು ನಗರ ಜಿಲ್ಲಾ ವಾಣಿಜ್ಯ ಕೋರ್ಟ್ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನ.8 ರಂದು ನ್ಯಾ. ಜಿ. ನರೇಂದರ್ ಮತ್ತು ನ್ಯಾ.ಪಿಎನ್ ದೇಸಾಯಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆದ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನಮ್ಮ ಪ್ರತಿವಾದಿಗಳು ಸಂಪೂರ್ಣ ಟ್ವಿಟ್ಟರ್ ಖಾತೆಯನ್ನು ತೆಗೆದು ಹಾಕುವಂತೆ ಕೋರಿದ್ದಾರೆ. ಆದರೆ 45 ಸೆಕೆಂಡಿನ ಆಡಿಯೋದಲ್ಲಿ ಮಾತ್ರ ಮ್ಯೂಸಿಕ್ ಬಳಕೆ ಮಾಡಲಾಗಿದೆ. ಮ್ಯೂಸಿಕ್ ಬಳಸಿ ನಾವು ತಪ್ಪು ಮಾಡಿದ್ದೇವೆ. ಕೆಜಿಎಫ್ ಮ್ಯೂಸಿಕ್ ಎಲ್ಲೆಲ್ಲಿ ಬಳಕೆ ಮಾಡಲಾಗಿದೆಯೋ ಅವೆಲ್ಲವನ್ನು ತೆಗೆದು ಹಾಕುತ್ತೇವೆ ಎಂದು ಮನವಿ ಮಾಡಿದ್ದರು.
ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕೆಜಿಎಫ್ ಹಾಡನ್ನು ಬಳಕೆ ಮಾಡಿದ್ದ ಟ್ವೀಟ್‌ಗಳನ್ನು(Tweet) ತೆಗೆದು ಹಾಕಬೇಕೆಂದು ಹೈಕೋರ್ಟ್ ಕಾಂಗ್ರೆಸ್‌ಗೆ ಆದೇಶ ನೀಡಿ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸಿತ್ತು.
ದೂರುದಾರರು ಸಂಪೂರ್ಣ ಖಾತೆಯನ್ನು ತೆಗೆದು ಹಾಕುವಂತೆ ಕೋರಿದ್ದಾರೆ. ಇಲ್ಲಿ ಪ್ರತಿವಾದಿಯವರಿಗೆ ರಾಜಕೀಯ ಕುಮ್ಮಕ್ಕು ಇದೆಯೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ. ನಾವು ತಪ್ಪು ಮಾಡಿದ್ದೇವೆ. ಆದರೆ ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶ ಇಲ್ಲ. ನಮ್ಮ ಅಭಿಪ್ರಾಯವನ್ನು ಆಲಿಸದೇ ಕೆಳ ನ್ಯಾಯಾಲಯ ಈ ರೀತಿಯ ಆದೇಶ ನೀಡಿದ್ದು ಎಷ್ಟು ಸರಿ? ದೇಶದ ದೊಡ್ಡ ರಾಜಕೀಯ ಪಕ್ಷದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಸಾಮಾಜಿಕ ಮಾಧ್ಯಮ ಧಮನಿಸುವುದಕ್ಕೆ ಕೋರ್ಟ್ ಅನುಮತಿ ನೀಡಬಾರದು ಎಂದು ಸಿಂಘ್ವಿ ಮನವಿ ಮಾಡಿದ್ದರು.
ಈ ವೇಳೆ ಎಂಆರ್‌ಟಿ ಸ್ಟುಡಿಯೋ ಪರ ವಕೀಲರಿಗೆ, ಈ ಪ್ರಕರಣದಲ್ಲಿ ಕಾಂಗ್ರೆಸ್ ಟ್ವಿಟ್ಟರ್ ಖಾತೆಯನ್ನು ತನಿಖೆ ಯಾಕೆ ಮಾಡಬೇಕು? ಆಯುಕ್ತರನ್ನು ಯಾಕೆ ನೇಮಿಸಬೇಕು? ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಪ್ಪನ್ನು ಒಪ್ಪಿಕೊಂಡ ಮೇಲೆ ತನಿಖೆ ಯಾಕೆ ಎಂದು ಪ್ರಶ್ನಿಸಿತು.
ಅಭಿಷೇಕ್ ಮನು ಸಿಂಘ್ವಿ, ನ.9ರ ಮಧ್ಯಾಹ್ನ 2 ಗಂಟೆಯ ಒಳಗಡೆ ಎಲ್ಲೆಲ್ಲಿ ಮ್ಯೂಸಿಕ್ ಬಳಕೆ ಮಾಡಿದ್ದೇವೋ ಅವುಗಳನ್ನು ತೆಗೆದು ಹಾಕುತ್ತೇವೆ. ಅರ್ಜಿದಾರ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಗೆ ದಾಖಲೆ ನೀಡುತ್ತೇವೆ ಎಂದು ತಿಳಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಕಾಪಿರೈಟ್ ಉಲ್ಲಂಘನೆ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ತೆಗೆದು ಹಾಕುವಂತೆ ಆದೇಶಿಸಿತ್ತು.