ನವದೆಹಲಿ: ನಟನೆ ಹಾಗೂ ಇತರೆ ಕೆಲಸಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ನಟ, ನಟಿಯರು ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಕೊರೊನಾ ಭೀತಿಯಿಂದಾಗಿ ಹೋಮ್ ಕ್ವಾರೆಂಟೈನ್ ವಿಧಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆವಲರು ಅವರ ಮುಂದಿನ ಸಿನಿಮಾದ ಇತರ ಕೆಲಸಗಳ ಕಡೆ ಗಮನಹರಿಸಿದರೆ, ಇನ್ನೂ ಕೆಲವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಅದೇ ರೀತಿ ಕೆಜಿಎಫ್-2 ಸಿನಿಮಾದಲ್ಲಿ ಪ್ರಧಾನಿ ಪಾತ್ರ ನಿರ್ವಹಿಸುತ್ತಿರುವ ರವೀನಾ ಟಂಡನ್ ಸಹ ಮನೆಯಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಮೊಮ್ಮಗನ ಜೊತೆ ಆಟವಾಡುವುದು, ಹಾಲು ಕುಡಿಸುವುದು, ಡೈಪರ್ ಚೇಂಜ್ ಮಾಡುವುದು ಸೇರಿದಂತೆ ಬಹುತೇಕ ಸಮಯವನ್ನು ಪ್ರೀತಿಯ ಮೊಮ್ಮಗನೊಂದಿಗೆ ಕಳೆಯುತ್ತಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, 2ನೇ ಸಲ ಅಜ್ಜಿಯಾಗಿರುವ ಖುಷಿಯಲ್ಲಿದ್ದಾರೆ. ತಮ್ಮ ಎರಡನೇ ಮೊಮ್ಮಗುವನ್ನು ಆಡಿಸುತ್ತಿರುವುದಾಗಿ ತಿಳಿಸಿದ್ದಾರೆ. ಬಹುತೇಕ ಸಮಯ ಔಟ್ ಡೋರ್ ಶೂಟಿಂಗ್ ಇರುವ ಕಾರಣ ನಟ, ನಟಿಯರು ತಮ್ಮ ಮನೆಯವರೊಂದಿಗೆ ಕಾಲ ಕಳೆಯಲು ಸಾಧ್ಯವಾಗಿರುವುದಿಲ್ಲ. ಇದೇ ಉತ್ತಮ ಅವಕಾಶ ಎಂದುಕೊಂಡು ಬಹುತೇಕರು ತಮ್ಮ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ.
ರವೀನಾ ಟಂಡನ್ ಅವರು ಇದೀಗ ತಮ್ಮ ಮಗಳ ಮಗು ರುದ್ರ್ ನೊಂದಿಗೆ ಕಾಲ ಕಳೆಯುತ್ತಿದ್ದು, ಸಂಪೂರ್ಣ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾರೆ. ಅಲ್ಲದೆ ಮೊಮ್ಮಗನಿಗೆ ರವೀನಾ ಮುದ್ದಾದ ಅಡ್ಡ ಹೆಸರನ್ನು ಇಟ್ಟಿದ್ದು, ಬಾಂಡ್ ಎಂದು ಕರೆಯುತ್ತಾರೆ. ಅದೇ ರೀತಿ ತಮಗೂ ನಿಕ್ ನೇಮ್ ಇಟ್ಟುಕೊಂಡಿದ್ದು, ಅವನಿಗಾಗಿ ನನ್ನ ಹೆಸರನ್ನು ‘ಗ್ಲಾಮ್ ಮಾ’ ಎಂದು ಬದಲಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್‍ಟ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ‘ಗ್ಲಾಮ್ ಮಾ’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ರವೀನಾ ಟಂಡನ್ 21 ವರ್ಷಕ್ಕೆ ಎರಡು ಹೆಣ್ಣುಮಕ್ಕಳ ತಾಯಿಯಾದವರು. ಸಿನಿಮಾಗಳಲ್ಲಿ ನಟಿಸುವಾಗಲೇ ರವೀನಾ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. ಈಗ ಅವರಲ್ಲಿ ಎರಡನೇ ಮಗಳಿಗೆ ಮಗುವಾಗಿದೆ. ಅವನ ಹೆಸರೇ ರುದ್ರ್, ಈ ರುದ್ರ್ ನೊಂದಿಗೆ ರವೀನಾ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಜಿಎಫ್-2 ಚಿತ್ರದ ತಮ್ಮ ಶೂಟಿಂಗ್ ಪೂರ್ಣಗೊಳಿಸಿರುವ ರವೀನಾ ಟಂಡನ್, ಚಿತ್ರ ತಂಡಕ್ಕೆ ಬೈ ಹೇಳಿ ಮನೆ ಸೇರಿಕೊಂಡಿದ್ದಾರೆ.