ನೆಲಮೂಲದ ಕಥಾನಕದ ಸುಳಿವಿನೊಂದಿಗೆ ಮೂಡಿ ಬಂದಿರುವ ಕೆರೆಬೇಟೆ (Kerebete) ಟ್ರೈಲರ್ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದೆ. ಸಾಮಾನ್ಯವಾಗಿ, ಒಂದಿಡೀ ಚಿತ್ರದ ಆತ್ಮವನ್ನು ಕೆಲವೇ ನಿಮಿಷಗಳಲ್ಲಿ ಕಾಣಿಸಿ, ಆಸಕ್ತಿ ಮೂಡಿಸೋದು ಸವಾಲಿನ ಸಂಗತಿ. ಕೆರೆಬೇಟೆ ಚಿತ್ರತಂಡ ಅದರಲ್ಲಿ ಯಶ ಕಂಡಿದೆ. ವಿಶೇಷವೆಂದರೆ, ಇದೀಗ ಕಿಚ್ಚಾ ಸುದೀಪ್ ಕೆರೆಬೇಟೆ ಟ್ರೈಲರ್ ವೀಕ್ಷಿಸಿದ್ದಾರೆ. ಅದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವಾಗಲೆಂದು ಶುಭ ಹಾರೈಸಿದ್ದಾರೆ.
Advertisement
ಈ ಸಿನಿಮಾವನ್ನು ರೂಪಿಸಿರುವ ಶೈಲಿಯನ್ನು ಮೆಚ್ಚಿಕೊಂಡಿರುವ ಕಿಚ್ಚಾ ಸುದೀಪ್, ಟ್ರೈಲರ್ ನೋಡಿದ ಮೇಲೆ ಈ ಸಿನಿಮಾದಲ್ಲಿ ಏನೋ ಇದೆ ಎಂಬ ಭರವಸೆ ಮೂಡಿಕೊಳ್ಳುತ್ತೆ ಎಂದಿದ್ದಾರೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಚೆಂದದ ಕಂಟೆಂಟು ಹೊಂದಿರುವ ಚಿತ್ರವಾಗಿಯೂ ಕೆರೆಬೇಟೆ ಗಮನ ಸೆಳೆಯುತ್ತದೆ. ಟ್ರೈಲರ್ ಮೂಲಕವೇ ಇಂಥಾದ್ದೊಂದು ಕುತೂಹಲ ಹುಟ್ಟುಹಾಕಿರೋದು ಮೆಚ್ಚುವಂಥಾ ಸಂಗತಿ ಎನ್ನುತ್ತಲೇ, ನಿರ್ಮಾಪಕ ಜೈಶಂಕರ್, ನಾಯಕ ನಟ ಗೌರಿಶಂಕರ್ (Gowrishankar), ನಿರ್ದೇಶಕ ರಾಜ್‍ಗುರು ಸೇರಿದಂತೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Advertisement
Advertisement
ಕಿಚ್ಚಾ ಸುದೀಪ್ (Sudeep) ಅವರ ಈ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಈಗಾಗಲೇ ಚಿತ್ರತಂಡ ಹೊಸಾ ಕಾನ್ಸೆಪ್ಟಿನೊಂದಿಗೆ ರಾಜ್ಯದ ಉದ್ದಗಲಕ್ಕೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಚಿತ್ರದ ಆಂತರ್ಯಕ್ಕನುಗುಣವಾಗಿ, ಮಲೆನಾಡಿನ ಶೈಲಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡಕ್ಕೆ ಎಲ್ಲೆಡೆಯೂ ಉತ್ತಮ ಸ್ವಾಗತ, ಪ್ರತಿಕ್ರಿಯೆ ಸಿಗುತ್ತಿದೆ. ಒಟ್ಟಾರೆಯಾಗಿ ಬಿಡುಗಡೆಯ ಅಂಚಿನಲ್ಲಿ ಕೆರೆಬೇಟೆಯ ಸುತ್ತೆಲ್ಲ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಸುದೀಪ್ ಅವರ ಮೆಚ್ಚುಗೆಯ ಮಾತುಗಳಂತೂ ಮತ್ತಷ್ಟು ಪ್ರೇಕ್ಷಕರು ಕೆರೆಬೇಟೆಯಲ್ಲ ಕುತೂಹಲದ ಕಣ್ಣಿಡುವಂತೆ ಮಾಡಿದೆ.
Advertisement
ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ.
ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.