ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ (Kerebete) ಚಿತ್ರ ಈಗ ಸಿನಿಮಾ ಪ್ರೇಮಿಗಳ ಗಮನ ಸೆಳೆದುಕೊಂಡಿದೆ. ಇದೇ ಮಾರ್ಚ್ 15ರಂದು ತೆರೆಗಾಣಲಿರುವ ಈ ಚಿತ್ರದ ಟೈಟಲ್ ಸಾಂಗ್ (Title Song) ಇದೀಗ ಬಿಡುಗಡೆಗೊಂಡಿದೆ. ಎಲ್ಲವನ್ನೂ ಈ ಸಿನಿಮಾದ ಆಂತರ್ಯಕ್ಕನುಗುಣವಾಗಿಯೇ ಮಾಡಲಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಪಕ್ಕಾ ಮಲೆನಾಡು ಸೀಮೆಯ ಹಳ್ಳಿ ಸೊಗಡಿನ ಹಿಮ್ಮೇಳದಲ್ಲಿ, ಸಂಸದರಾದ ಬಿ.ವೈ ರಾಘವೇಂದ್ರ ಅವರ ಸಮ್ಮುಖದಲ್ಲಿ ಕೆರೆಬೇಟೆಯ ಟೈಟಲ್ ಸಾಂಗ್ ಅನಾವರಣಗೊಂಡಿದೆ.
ಆರಂಭಿಕವಾಗಿ ಶಿವಮೊಗ್ಗದ ನಗರದಾದ್ಯಂತ ಕುದುರೆ ಗಾಡಿ ಹಾಗೂ ಬೈಕ್ ರ್ಯಾಲಿಯನ್ನು ಸಾಂಕೇತಿಕವಾಗಿ ನಡೆಸಲಾಯ್ತು. ವಿಶೇಷವೆಂದರೆ ರಿಯಲ್ ಕೆರೆಬೇಟೆ ಪಟುಗಳೇ, ಆ ಉಡುಗೆ ತೊಡುಗೆಗಳೊಂದಿಗೆ ಪ್ರತೀ ಜಿಲ್ಲೆಗಳಿಗೂ ಪ್ರಚಾರ ಕಾರ್ಯಕ್ಕೆ ಹೊರಟು ನಿಂತಿದ್ದಾರೆ. ಆ ಕಾರ್ಯಕ್ಕೂ ಈ ಸಂದರ್ಭದಲ್ಲಿಯೇ ಚಾಲನೆ ಸಿಕ್ಕಿದೆ. ಇದಲ್ಲದೇ ಮಲೆನಾಡು ಭಾಗದ ಕಹಳೆ, ಕೋಲಾಟದಂಥಾ ಕಲೆಗಳೂ ಕೂಡಾ ಈ ಸಂದರ್ಭದಲ್ಲಿ ಮೇಳೈಸಿವೆ. ನಂತರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಬಿ ವೈ ರಾಘವೇಂದ್ರ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಗೀತೆ ಬಿಡುಗಡೆಗೊಂಡಿದೆ.
ಮಳಿ ಆತು ಬೆಳಿ ಆತು ಬ್ಯಾಸಗೀನೂ ಬ್ಯಾಸರಾತು… ಎಂಬ ಹಾಡು ನಿಜಕ್ಕೂ ಮಲೆನಾಡು ಭಾಷೆಯನ್ನು ಶಶಕ್ತವಾಗಿ ಹಿಡಿದಿಟ್ಟುಕೊಂಡಂತೆ ರೂಪುಗೊಂಡಿದೆ. ಈವರೆಗೂ ಮಲೆನಾಡು ಸೀಮೆಯ ಚಿತ್ರಣ ಸಿನಿಮಾವಾದರೂ ಕೂಡಾ ಅಲ್ಲಿನ ಭಾಷೆ ಪೂರ್ಣಪ್ರಮಾಣದಲ್ಲಿ ಬಳಕೆಯಾದದ್ದಿಲ್ಲ. ಆದರೆ, ಈ ಸಿನಿಮಾದುದ್ದಕ್ಕೂ ಅದರದ್ದೇ ಮೇಲುಗೈ. ಸದರಿ ಶೀರ್ಷಿಕೆ ಗೀತೆಯೂ ಕೂಡಾ ಮಲೆನಾಡು ಫ್ಲೇವರಿನಲ್ಲಿ ಅದ್ದಿ ತೆಗೆದಂತೆ ಮೂಡಿ ಬಂದಿದೆ. ಅದ್ಯಾವ ಸೀಮೆಯಲ್ಲೇ ಇದ್ದರೂ ಮಲೆನಾಡಿನ ನೆನಪನ್ನು ಎದೆಗಾನಿಸಿ ತಂಪಾಗಿಸುವಂಥಾ ಈ ಹಾಡು ಈ ದಿನಮಾನದ ಅತೀ ಅಪರೂಪದ ಗೀತೆಯಾಗಿ ದಾಖಲಾಗುವಂತಿದೆ.
ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಈ ಹಾಡನ್ನು ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ಹಾಗೂ ಕರಿಬಸವ ಗಾಯನದೊಂದಿಗೆ ಈ ಹಾಡು ಮೂಡಿಬಂದಿದೆ. ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಮಲೆನಾಡು ಗೊಂಬೆಯಂಥಾ ವೀಡಿಯೋಈ ಸಾಂಗ್ ಮೂಲಕ ಕೆರೆಬೇಟೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಇನ್ನೇನು ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಲಾಂಚ್ ಆಗಿರುವ ಈ ಟೈಟ್ ಸಾಂಗ್ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ.