ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದ ಕೆರೆಬೇಟೆ (Kerebete) ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟಗಳು ಒಂದೆರಡಲ್ಲ. ಇಲ್ಲಿ ನೋಡಿದವರಿಗೆಲ್ಲ ಇಷ್ಟವಾದ ಚಿತ್ರವೊಂದನ್ನು ಉಳಿಸಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದಕ್ಕೆ ಈ ಸಿನಿಮಾ ಕಣ್ಣೆದುರಿನ ಉದಾಹರಣೆ. ಬಹುಶಃ ಬೇರೆ ಯಾರೇ ಆಗಿದ್ದರೂ ಕೆರೆಬೇಟೆ ಬಿಡುಗಡೆಗೊಂಡ ಎರಡನೇ ವಾರದ ಹೊತ್ತಿಗೆಲ್ಲ ಕಣ್ಮರೆಯಾಗುತ್ತಿತ್ತು. ಆದರೆ ನಾಯಕ ನಟ ಗೌರಿಶಂಕರ್, ನಿರ್ಮಾಪಕ ಜೈಶಂಕರ್ ಹಾಗೂ ನಿರ್ದೇಶಕ ರಾಜ್ ಗುರು ಅವಿರತವಾಗಿ ಪ್ರಯತ್ನಿಸಿದ್ದಾರೆ. ಜಿದ್ದಿಗೆ ಬಿದ್ದಂತೆ ಪ್ರೇಕ್ಷಕರನ್ನು ತಲುಪುತ್ತಾ, ಸಿನಿಮಾ ಮಂದಿರಗಳಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿಯೇ ಇದೀಗ ಕೆರೆಬೇಟೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿಕೊಂಡಿದೆ.
ಒಂದು ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಐವತ್ತು ದಿನ ದಾಟಿದ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಭಾಗವಾಗಿ ಕಾರ್ಯನಿರ್ವಹಿಸಿದವರಿಗೆಲ್ಲ ನೆನಪಿನ ಕಾಣಿಕೆ ಕೊಡುವ ಮೂಲಕ ಅರ್ಥವತ್ತಾದ ನಡೆ ಅನುಸರಿಸಲಾಗಿದೆ. ಇದೇ ವೇದಿಕೆಯಲ್ಲಿ ಗೌರಿಶಂಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಅಂದಿದ್ದಾರೆ. ಈ ಅವಧಿಯಲ್ಲಿ ಒಳ್ಳೆ ನಿರ್ದೇಶನ, ಕಥೆ, ಒಂದೊಳ್ಳೆ ಬ್ಯಾನರ್ ಸಿಕ್ಕರೆ ನಾಯಕ ನಟನಾಗಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ರಾಜಹಂಸದಿಂದ ಇಲ್ಲೀವರೆಗೆ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮಾಸೆಯಂತೆ ನಟನಾಗಿ ಮುಂದುವರೆಯಲು ಅವರು ತೀರ್ಮಾನಿಸಿದ್ದಾರೆ. ಈ ಐವತ್ತು ದಿನಗಳ ಮೈಲಿಗಲ್ಲು ತಲುಪಿಕೊಂಡ ಯಾನ ಸಾಮಾನ್ಯದ್ದೇನಲ್ಲ. ಗೌರಿಶಂಕರ್ ಕೆರೆಬೇಟೆಯನ್ನು ಸೋಲಲು ಬಿಡದಂತೆ ಶಕ್ತಿ ಮೀರಿ ಶ್ರಮಿಸಿದ್ದರು. ಅವರ ಒಂದೊಂದು ಪಟ್ಟುಗಳೂ ಕೂಡಾ ಪ್ರೇಕ್ಷಕರನ್ನು ಮುಟ್ಟಿ ಮೋಡಿ ಮಾಡಿದ್ದು ಸತ್ಯ. ಒಂದು ಸಮಸ್ಯೆ ಬಗೆಹರಿದಾಕ್ಷಣವೇ ಮತ್ತೊಂದು ಸವಾಲೆದುರಾಗೋ ಸ್ಥಿತಿಯನ್ನೆಲ್ಲ ಚಿತ್ರತಂಡ ಒಗ್ಗಟ್ಟಿನಿಂದ ಎದುರಿಸಿದೆ. ಈ ಕಾರಣದಿಂದಲೇ ಐವತ್ತರ ಸಂಭ್ರಮ ಸಾಧ್ಯವಾಗಿದೆ.
ಕನ್ನಡ ಚಿತ್ರರಂಗದಲ್ಲೀಗ ಪ್ರತಿಕೂಲ ವಾತಾವರಣವಿದೆ. ಅದೆಲ್ಲವನ್ನೂ ಹೇಗೆ ಅವುಡುಗಚ್ಚಿ ಎದುರಿಸಬೇಕು, ಜೈಸಿಕೊಳ್ಳಬೇಕೆಂಬುದಕ್ಕೆ ಕೆರೆಬೇಟೆ ಚಿತ್ರತಂಡ ತಾಜಾ ಉದಾಹರಣೆಯಾಗಿ ಕಾಣಿಸುತ್ತದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದಿರೋದು ಈ ಸಿನಿಮಾದೊಳಗಿರುವ ಗಟ್ಟಿ ಕಂಟೆಂಟಿನ ಕಾರಣದಿಂದಲೇ. ಮಲೆನಾಡಿನ ಅಸ್ಮಿತೆಯಂತಿರೋ ಕೆರೆಬೇಟೆಯೆಂಬ ಆಚರಣೆಯ ಸುತ್ತ ರೂಪುಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಡೆಗೂ ಸೋಲು ಗೆಲುವಿನಾಚೆಗೆ ಒಂದೊಳ್ಳೆ ಚಿತ್ರವಾಗಿ ಕೆರೆಬೇಟೆ ದಾಖಲಾಗಿದೆ. ಕಷ್ಟಪಟ್ಟು ಇದೆಲ್ಲವನ್ನೂ ಸಾಧ್ಯವಾಗಿಸಿಕೊಂಡ ಚಿತ್ರತಂಡವನ್ನು ಅಭಿನಂದಿಸದಿರಲು ಸಾಧ್ಯವೇ?
ಜನಮನ ಟಾಕೀಸ್ ಮೂಲಕ ಜೈಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಘಶಕರಾಗಿ ಬರವಸೆ ಮೂಡಿಸಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ತನ್ನೊಳಗಿನ ಕಸುವು, ಕೊಂಚವೂ ಆಚೀಚೆ ಕದಲದ ಶತಪ್ರಯತ್ನಗಳಿಂದಲೇ ಕೆರೆಬೇಟೆ ಐವತ್ತು ದಿನಗಳನ್ನು ದಾಟಿಕೊಂಡಿದೆ.