ಕೊಚ್ಚಿ: ಇಂದಿನಿಂದ ಕರ್ನಾಟಕ (Karnataka) ಮತ್ತು ತಮಿಳುನಾಡಿಗೆ (Tamil Nadu) ತೆರಳುವ ಎಲ್ಲಾ ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕೇರಳ ಐಷಾರಾಮಿ ಬಸ್ ಮಾಲೀಕರ (Luxury Bus Owners Association, Kerala) ಸಂಘ ಪ್ರಕಟಿಸಿದೆ
ಸೋಮವಾರ ಸಂಜೆ 6 ಗಂಟೆಯಿಂದ ಟೂರಿಸ್ಟ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಐಷಾರಾಮಿ ಬಸ್ ಮಾಲೀಕರ ಸಂಘ, ಕೇರಳ ರಾಜ್ಯ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಏನಿದು ವೆಡ್ಡಿಂಗ್ ನ್ಯಾನಿ – ಒಂದೇ ದಿನಕ್ಕೆ ಗಳಿಸ್ಬೋದು 88,000 ರೂ.
ಎರಡೂ ರಾಜ್ಯಗಳು ಕಾನೂನುಬಾಹಿರ ರಾಜ್ಯದ ತೆರಿಗೆಗಳನ್ನು (Tax) ವಿಧಿಸುತ್ತಿದೆ. ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ ಪ್ರವಾಸಿ ಪರವಾನಗಿ (AITP) ಬಸ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಎಜೆ ರಿಜಾಸ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಯಡಿ ನೀಡಲಾದ ಮಾನ್ಯ AITP ಗಳನ್ನು ಹೊಂದಿದ್ದರೂ, ಕೇರಳದ ಪ್ರವಾಸಿ ವಾಹನಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ನಿಲ್ಲಿಸಿ ದಂಡ ವಿಧಿಸಲಾಗುತ್ತಿದೆ ಮತ್ತು ವಶಕ್ಕೆ ಪಡೆಯಲಾಗುತ್ತಿದೆ ಎಂದು ಸಂಘ ದೂರಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ, ತಮಿಳುನಾಡು ಅಧಿಕಾರಿಗಳು ಕೇರಳ-ನೋಂದಾಯಿತ ವಾಹನಗಳಿಂದ ಅಕ್ರಮವಾಗಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಇದರಿಂದ ನಿರ್ವಾಹಕರು ಮತ್ತು ಪ್ರಯಾಣಿಕರು ಪದೇ ಪದೇ ತೊಂದರೆ ಅನುಭವಿಸುತ್ತಿದ್ದಾರೆ. ಆರ್ಥಿಕ ನಷ್ಟ ಮತ್ತು ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಯಿಂದಾಗಿ ಅನೇಕರು ಈಗ ಅಂತರರಾಜ್ಯ ಸೇವೆಗಳನ್ನು ನಿರ್ವಹಿಸಲು ಭಯಪಡುತ್ತಿದ್ದಾರೆ ಎಂದು ಹೇಳಿದೆ.
ಪ್ರತಿಭಟನೆ ಕಾರಣಕ್ಕೆ ನಾವು ಸೇವೆಯನ್ನು ಸ್ಥಗಿತ ಮಾಡುತ್ತಿಲ್ಲ. ಬದಲಾಗಿ ವಾಹನಗಳು, ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ತೆಗೆದುಕೊಳ್ಳಲಾದ ಬಲವಂತದ ಕ್ರಮ ಇದಾಗಿದೆ ಎಂದು ಸಂಘ ಸ್ಪಷ್ಟಪಡಿಸಿದೆ.
ಈ ಕಾನೂನುಬಾಹಿರ ಪದ್ಧತಿಗಳನ್ನು ಕೊನೆಗೊಳಿಸಲು ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ AITP ಚೌಕಟ್ಟಿನ ಏಕರೂಪದ ಅನುಷ್ಠಾನ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಂಘ ಮನವಿ ಮಾಡಿದೆ.

